×
Ad

ನಿರ್ಲಕ್ಷ ತೋರಿದ ವೈದ್ಯರ ಪರವಾನಿಗೆ ಅಮಾನತಿಗೆ ಡಿಸಿ ಸೂಚನೆ

Update: 2016-05-11 14:35 IST

ಮಂಗಳೂರು, ಮೇ 11: ದ.ಕ. ಜಿಲ್ಲೆಯ ಲೇಡಿಗೋಶನ್ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ಸಂದರ್ಭ ತಾಯಂದಿರು ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದ ಸಾವಿಗೀಡಾದ ಪ್ರಕರಣಗಳಲ್ಲಿ ಸಮರ್ಪಕ ಉತ್ತರ ನೀಡದ ಆಸ್ಪತ್ರೆ ಹಾಗೂ ನಿರ್ಲಕ್ಷ ತೋರಿದ ವೈದ್ಯರ ಪರವಾನಿಗೆಯನ್ನು ತಕ್ಷಣದಿಂದ ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಇಂದು ಹೆರಿಗೆ ಸಂದರ್ಭ ತಾಯಿ ಮತ್ತು ಶಿಶು ಮರಣ ಪ್ರಕರಣಗಳ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಈ ಸೂಚನೆ ನೀಡಿದರು.

ಹೆರಿಗೆ ಸಂದರ್ಭದಲ್ಲಿ ವೈದ್ಯರ ನಿರ್ಲಕ್ಷದಿಂದ ಸಾವಿಗೀಡಾದ ಪ್ರಕರಣಗಳ ಕುರಿತು ಜಿಲ್ಲಾ ವೈದ್ಯಾಧಿಕಾರಿ ನೇತೃತ್ವದ ಸಾವು ಪರಿಶೀಲಾ ಸಮಿತಿಯ ವರದಿಯ ಆಧಾರದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳಿಗೆ ನೋಟೀಸ್ ನೀಡಿ ಒಂದು ವರ್ಷವಾದರೂ ಉತ್ತರ ಬಾರದಿರುವ ಬಗ್ಗೆ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ವೈದ್ಯಾಧಿಕಾರಿಗಳನ್ನು ತರಾಟೆಗೈದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಶಿಶು ಕಲ್ಯಾಣ ಅಧಿಕಾರಿಗಳನ್ನು ವಿರುದ್ಧ ತೀಕ್ಷ್ಣವಾಗಿ ಆಕ್ಷೇಪಿಸಿದ ಜಿಲ್ಲಾಧಿಕಾರಿ, ತನಿಖೆಯ ವೇಳೆ ವೈದ್ಯರ ನಿರ್ಲಕ್ಷವೆಂದು ವರದಿಯಲ್ಲಿ ತಿಳಿಸಲಾಗಿದ್ದರೂ ಸಂಬಂಧಪಟ್ಟವರ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕಿರುವುದಾದರೂ ಯಾತಕ್ಕೆ? ಕ್ರಮ ಕೈಗೊಳ್ಳಲು ಅಂಜಿಕೆ ಇರಬೇಕಾದರೆ ನೀವು ಅವರ ಜತೆ ಶಾಮೀಲಾಗಿದ್ದೀರಾ ಎಂದು ಪ್ರಶ್ನಿಸಿದರು.

ಕಳೆದ ವರ್ಷ ಜಿಲ್ಲೆಯಲ್ಲಿ ಹೆರಿಗೆ ಸಂದರ್ಭ 22 ತಾಯಂದಿರು ಸಾವಿಗೀಡಾಗಿರುವ ಪ್ರಕರಣಗಳು ನಡೆದಿದ್ದು, ಎಲ್ಲಾ ಪ್ರಕರಣಗಳಲ್ಲೂ ಹಾರಿಕೆಯ ಉತ್ತರ ನೀಡಲಾಗಿದೆ. ಡಿಎಚ್‌ಒರವರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಿಲ್ಲ. ಸಭೆಗೆ ಡಿಎಂಒ ಗೈರು ಹಾಜರಿ. ಈ ರೀತಿಯ ವ್ಯವಸ್ಥೆಯಿಂದ ಜಿಲ್ಲೆಯ ಜನರಿಗೆ ಆರೋಗ್ಯ ಕ್ಷೇತ್ರದಿಂದ ಯಾವ ನಿರೀಕ್ಷೆ ಇರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ನೇರವಾಗಿ ಆಕ್ಷೇಪಿಸಿದರು.

ಪ್ರಕರಣಗಳು ಸಂಭವಿಸಿ ಒಂದು ವರ್ಷವಾಗಿದ್ದು, ತಾಯಿ ಹಾಗೂ ಶಿಶು ಮರಣಗಳ ಕುರಿತು ಗಂಭೀರವಾಗಿ ಪರಿಗಣಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿತ್ತು. ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ನೇತೃತ್ವದಲ್ಲಿ ಕಳೆದ ಜನವರಿ ತಿಂಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ನಿಯಂತ್ರಣ ಮತ್ತು ವರದಿ ನೀಡುವ ತಜ್ಞರ ಸಮಿತಿ ಸಭೆಯಲ್ಲೂ ಜಿಲ್ಲೆಯಲ್ಲಿರುವ ನರ್ಸಿಂಗ್ ಹೋಂಗಳ ಬಗ್ಗೆ ನಿಗಾ ವಹಿಸಿ ಕ್ರಮಕ್ಕೆ ಸೂಚಿಸಲಾಗಿತ್ತು. ಹಾಗಿದ್ದರೂ ನರ್ಸಿಂಗ್ ಹೋಂಗಳನ್ನು ಗ್ರೇಡಿಂಗ್ ಮಾಡುವ ಕಾರ್ಯವನ್ನು ಡಿಎಚ್‌ಒ ಇನ್ನೂ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆರಿಗೆ ಸಾವು ಪ್ರಕರಣಗಳಿಗೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ಎಎನ್‌ಎಂ, ವೈದ್ಯರು ಹಾಗೂ ಆಸ್ಪತ್ರೆಗಳನ್ನು ಜವಾಬ್ಧಾರನ್ನಾಗಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.

ಈ ಸಂದರ್ಭ ಸಭೆಗೆ ಸುಮಾರು ಒಂದು ಗಂಟೆ ತಡವಾಗಿ ಆಗಮಿಸಿದ ವೆನ್‌ಲಾಕ್ ಆಸ್ಪತ್ರೆಯ ಆರ್‌ಎಂಒ (ಸ್ಥಾನಿಕ ವೈದ್ಯಾಧಿಕಾರಿ) ನೇರವಾಗಿ ವೇದಿಕೆಗೆ ತೆರಳಿ ಆಸೀನರಾಗಲು ಯತ್ನಿಸಿದಾಗ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರವರು ಅವರನ್ನು ಯಾಕಾಗಿ ಬಂದಿದ್ದು ಎಂದು ಪ್ರಶ್ನಿಸಿದರು.

ಅವರು ಉತ್ತರಿಸಲು ತಡವರಿಸುತ್ತಾ, ಸಭೆಗೆ ಬಂದಿದ್ದು ಎಂದಾಗ, ಎಲ್ಲಿದೆ ಪೈಲ್ ಎಂದು ಸಿಟ್ಟುಗೊಂಡ ಜಿಲ್ಲಾಧಿಕಾರಿ ಪ್ರಶ್ನಿಸಿದರು. ಅವರ ಕೈಯ್ಯಲ್ಲಿ ಫೈಲ್ ಇರದನ್ನು ಗಮನಿಸಿ ಮತ್ತಷ್ಟು ಕುಪಿತರಾದ ಜಿಲ್ಲಾಧಿಕಾರಿ, ಅಧಿಕಾರಿಯನ್ನು ಸಭೆಯಿಂದ ತೆರಳುವಂತೆ ಸೂಚಿಸಿದ ಪ್ರಸಂಗವೂ ನಡೆಯಿತು.

ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್, ಶಿಶು ಕಲ್ಯಾಣಾಧಿಕಾರಿ ಸಿಕಂದರ್ ಪಾಶಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News