ಬ್ಯಾರಿ ಗೈಸ್ ಕೆ.ಎಸ್.ಎ.ನಿಂದ ನಗರ ವ್ಯಾಪ್ತಿಯಲ್ಲಿ ಉಚಿತ ನೀರು ಪೂರೈಕೆ
ಮಂಗಳೂರು, ಮೇ 11: ಸಮರ್ಪಕ ಕುಡಿಯುವ ನೀರಿನ ಪೂರೈಕೆಯಿಲ್ಲದೆ ಕಂಗಾಲಾಗಿರುವ ಮಂಗಳೂರು ನಗರದ ಜನತೆಯ ನೀರಿನ ಬವಣೆಯನ್ನು ತಕ್ಕಮಟ್ಟಿಗೆ ನೀಗುವ ಕೆಲಸವನ್ನು ಬ್ಯಾರಿ ಗೈಸ್ ಕೆಎಸ್‌ಎ ತಂಡ ಮಾಡುತ್ತಿದೆ. ನಗರ ವ್ಯಾಪ್ತಿಯಲ್ಲಿ ನೀರಿಲ್ಲದ ಪ್ರದೇಶಗಳಿಗೆ ಉಚಿತವಾಗಿ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ 18 ದಿನಗಳಿಂದ ಸುರತ್ಕಲ್ ವ್ಯಾಪ್ತಿಯ ಪ್ರದೇಶಗಳಿಗೆ ಸಂಸ್ಥೆಯ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ, ಕುಳಾಯಿ ಪ್ರದೇಶಗಳಲ್ಲಿ ಸ್ಥಳೀಯ ಕಾರ್ಪೊರೇಟರ್‌ಗಳ ಮುಖಾಂತರ ನೀರು ಪೂರೈಕೆ ಮಾಡಲಾಗುತ್ತಿದೆ. ಸಮರ್ಪಕವಾಗಿ ಮಳೆ ಬಂದು ನೀರಿನ ಸಮಸ್ಯೆ ಸಂಪೂರ್ಣ ಬಗೆಹರಿಯುವವರೆಗೂ ನಿರಂತರವಾಗಿ ಉಚಿತವಾಗಿ ನೀರು ಪೂರೈಕೆ ಮಾಡಲು ಸಂಸ್ಥೆಯು ನಿರ್ಧರಿಸಿದೆ.
ಬ್ಯಾರಿ ಗೈಸ್ ಕೆ.ಎ.ಸ್.ಎ ಮೂಲತಃ ಸೌದಿ ಅರೆಬಿಯಾ ಮೂಲದ ಸಂಸ್ಥೆಯಾಗಿದ್ದು, ಹತ್ತಾರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಮನೆ ಇಲ್ಲದ ಬಡವರ್ಗದ ಮಂದಿಗಾಗಿ ಜಾತಿ, ಮತ, ಧರ್ಮ ಬೇಧವಿಲ್ಲದೆ ಸುಮಾರು 10 ಮನೆಗಳನ್ನು ಉಚಿತವಾಗಿ ನಿರ್ಮಿಸುವ ಯೋಜನೆ ಸಂಸ್ಥೆಯ ಮುಂದಿದೆ.
ಇದರ ಜೊತೆಗೆ ಅನೇಕರಿಗೆ ಆರ್ಥಿಕ ಸಹಾಯವನ್ನೂ ನೀಡಲಾಗಿದೆ. ಮನೆ ನಿರ್ಮಿಸುವ ಯೋಜನೆಗೆ ಶೀಘ್ರವೇ ಚಾಲನೆ ದೊರಕಲಿದ್ದು, ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ರಿಯಾದ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಸಂಸ್ಥೆಯ ಮುಖಂಡರು ತಿಳಿಸಿದ್ದಾರೆ.