ಸ್ಮಾರ್ಟ್ ಸಿಟಿಯಿಂದ ಏನು ಪ್ರಯೋಜನ ?
ಹೊಸದಿಲ್ಲಿ, ಮೇ 11 : ಬೇಗುಸರಾಯಿಯ ಬಿಜೆಪಿ ಸಂಸದ ಭೋಲಾ ಸಿಂಗ್ ಬುಧವಾರ ಸಂಸತ್ತಿನಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯನ್ನು ಟೀಕಿಸಿ ಮಾತನಾಡಿದ ಭೋಲಾ ಸಿಂಗ್, " ಪೂರ್ವ ಭಾರತದಲ್ಲಿ ಅಭಿವೃದ್ಧಿ ಕಡಿಮೆಯಾಗಿದ್ದರೂ ಅಲ್ಲಿಯ ಜನರು ಬುದ್ಧಿವಂತರು. ಆದರೆ ಪಶ್ಚಿಮ ಭಾರತದಲ್ಲಿ ಅಭಿವೃದ್ಧಿ ಆಗಿದ್ದರೂ ಅಲ್ಲಿಯ ಜನರಿಗೆ ಮೆದುಳಿಲ್ಲ " ಎಂದು ಹೇಳಿದ್ದಾರೆ .
ಭೋಲಾ ಸಿಂಗ್ ಈ ಹೇಳಿಕೆ ನೀಡುವಾಗ ಸುದೀರ್ಘ ಅವಧಿಗೆ ( ಪಶ್ಚಿಮ ಭಾರತದಲ್ಲಿರುವ) ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರೂ ಸದನದಲ್ಲಿದ್ದರು.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಟೀಕಿಸಿದ ಬಿಜೆಪಿಯವರೇ ಆದ ಭೋಲಾ ಸಿಂಗ್, ಈ ಯೋಜನೆ ಬಿಹಾರದಂತಹ ರಾಜ್ಯಗಳಿಗೆ ಯಾವ ಪ್ರಯೋಜನ ತರಲಿದೆ ಎಂದು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರನ್ನು ಪ್ರಶ್ನಿಸಿದರು. ನಗರ ಸ್ಥಳೀಯ ಸಂಸ್ಥೆಗಳು ಮಾಡುತ್ತಿರುವ ಕೆಲಸಕ್ಕೂ ಸ್ಮಾರ್ಟ್ ಸಿಟಿ ಯೋಜನೆಗೂ ಏನು ವ್ಯತ್ಯಾಸ ಎಂದೂ ಅವರು ಕೇಳಿದರು.