ಮೇ 19ರ ದ.ಕ. ಜಿಲ್ಲಾ ಬಂದ್ ಗೆ ಸಿಪಿಐಎಂ ಬೆಂಬಲವಿಲ್ಲ: ಬಿ.ಎಂ. ಭಟ್
ಪುತ್ತೂರು, ಮೇ 11: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಮೇ 19ರಂದು ದ.ಕ ಜಿಲ್ಲಾ ಬಂದ್ ಗೆ ಅನಗತ್ಯವಾಗಿ ಕರೆ ನೀಡಲಾಗಿದೆ. ಇಂತಹ ಅನಗತ್ಯ ಬಂದ್ ಗೆ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಬೆಂಬಲ ನೀಡುವುದಿಲ್ಲ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಕಾರ್ಯದರ್ಶಿ ಬಿ.ಎಂ. ಭಟ್ ತಿಳಿಸಿದ್ದಾರೆ.
ಎತ್ತಿನ ಹೊಳೆ ಯೋಜನೆಗೂ, ದ.ಕ ಜಿಲ್ಲೆಯ ನೀರಿನ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ. ಇದು ಬಂದ್ ಗೆ ಕರೆ ನೀಡುವವರಿಗೂ ತಿಳಿದ ವಿಷಯ. ಆದರೂ ಕಾಂಗ್ರೆಸ್ ಹಾಗೂ ಬಿಜೆಪಿ ಇಲ್ಲಿ ಯೋಜನೆಯನ್ನು ವಿರೋಧಿಸುತ್ತಾ, ಕೋಲಾರದಲ್ಲಿ ಬೆಂಬಲ ನೀಡುತ್ತಿವೆ. ಎತ್ತಿನಹೊಳೆ ಯೋಜನೆಯು ಜಿಲ್ಲೆಗೆ ನಿಜವಾಗಿಯೂ ಸಮಸ್ಯೆ ಎಂದು ಭಾವಿಸುವ ಈ ಜಿಲ್ಲೆಯ ಕಾಂಗ್ರೆಸ್, ಬಿಜೆಪಿ ಪಕ್ಷದ ಜನಪ್ರತಿನಿಧಿಗಳು ಲೋಕಸಭೆಯಲ್ಲಾಗಲಿ, ವಿಧಾನ ಸಭೆಯಲ್ಲಾಗಲಿ ತುಟಿ ಬಿಚ್ಚುವುದಿಲ್ಲ. ಹೀಗಿದ್ದರೂ ದ.ಕ ಜಿಲ್ಲಾ ಬಂಗೆ ಬೆಂಬಲ ಘೋಷಿಸಿದರೆ ಇದಕ್ಕಿಂತ ದೊಡ್ಡ ಹಾಸ್ಯಾಸ್ಪಾದ ಬೇರೊಂದಿಲ್ಲ ಎಂದು ಹೇಳಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ನೀರಿನ ಫಸಲು ಕಡಿಮೆಯಾಗುತ್ತಾ ಬರುತ್ತಿದೆ. ಇದರ ಪರಿಹಾರಕ್ಕಾಗಿ ಸಿಪಿಎಂ ಹೋರಾಟ ನಡೆಸುತ್ತಾ ಬಂದಿದೆ. ಆದರೆ ನಮ್ಮ ಹೋರಾಟಕ್ಕೆ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವವರು ಬೆಂಬಲ ನೀಡಿಲ್ಲ. ಜಿಲ್ಲೆಯ ನದಿಗಳಿಗೆ ಕಿಂಡಿ ಅಣೆಕಟ್ಟು, ಇಂಗು ಗುಂಡಿ ರಚಿಸಿ ನೀರಿಂಗಿಸುವ ಬಗ್ಗೆ ಚಿಂತಿಸದ ಜನ ನೀರಿನ ಸಮಸ್ಯೆಗೆ ಎತ್ತಿನಹೊಳೆ ಕಾರಣ ಎನ್ನತ್ತಾ ಜನರ ದಾರಿ ತಪ್ಪಿಸುತ್ತಿರುವುದು ಸರಿಯಲ್ಲ. ಕೇವಲ ರಾಜಕೀಯ ಲಾಭಕ್ಕಾಗಿ ನೈಜ ಸಮಸ್ಯೆಗಳಿಂದ ದೂರ ಸರಿಯಲು ಎಂಆಪಿಎಲ್‌ನಂತಹ ಕಂಪನಿಗಳು ನೇತ್ರಾವತಿ ನೀರು ಕಬಳಿಸುವುದನ್ನು ಜನ ವಿರೋಧಿಸದಂತೆ ಈ ನಾಟಕ ಆಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸಾಂಪ್ರದಾಯಿಕವಾಗಿ ಹೊಲಗದ್ದೆಗಳಿಗೆ ನೀರಿಂಗಿಸಲು ಪ್ರಯತ್ನ ಮಾಡಬೇಕಾದ ಸರಕಾರ ಅಕ್ರಮ ಮರಳು ಸಾಗಾಟಕ್ಕೆ ಬೆಂಬಲ ನೀಡುತ್ತಿದೆ. ಇದರ ಪರಿಣಾಮ ಜಿಲ್ಲೆಗೆ ನೀರಿನ ಬರ ಹೆಚ್ಚಾಗಲು ಕಾರಣವಾಗಿದ್ದರೂ, ಮರಳು ಲಾಬಿ ವಿರುದ್ಧ ಯಾರೂ ಜಿಲ್ಲೆ ಬಂಗೆ ಕರೆ ನೀಡಿರುವುದಿಲ್ಲ. ಜಿಲ್ಲೆಯಲ್ಲಿ ನೀರಿನ ಬರ ಬರುವ ಮೊದಲೇ ಎತ್ತಿನ ಹೊಳೆ ಯೋಜನೆ ಜಾರಿಯಾಗಿತ್ತು. ಜಿಲ್ಲೆ ಗದ್ದೆ ಬೇಸಾಯಗಳಿಂದ ಕಂಗೊಳಿಸುತ್ತಿದ್ದು, ಬಿದ್ದ ಮಳೆಯ ನೀರು ಕೂಡಾ ಭೂಮಿಯಲ್ಲಿ ಇಂಗುತ್ತಿತ್ತು. ಆದರೆ ಜೆಲ್ಲೆಯಲ್ಲಿ ಭತ್ತದ ಬೇಸಾಯ ಲಾಭದಾಯಕವಲ್ಲದ ಕಾರಣ ಅನಿವಾರ್ಯವಾಗಿ ಅಡಿಕೆ, ರಬ್ಬರ್ ಬೆಳೆಗಳಿಗೆ ರೈತರು ಶರಣಾಗಿ ಹೊಗದ್ದೆಗಳೆಲ್ಲಾ ನಾಶವಾಯಿತು. ಇದರ ಪರಿಣಾಮ ಜನರು ಆರ್ಥಿಕವಾಗಿ ಸಬಲರಾದರೂ ಜಿಲ್ಲೆಯಲ್ಲಿ ನೀರಿಗೆ ಬರ ಉಂಟಾಗಿದೆ. ಮಳೆಯ ನೀರೆಲ್ಲಾ ಸಮುದ್ರ ಸೇರತೊಡಗಿದೆ.
ಜಿಲ್ಲೆಯಲ್ಲಿ ಇಂತಹ ನೀರಿನ ಸಮಸ್ಯೆಯಿದ್ದರೂ ಅದರ ಬಗ್ಗೆ ಯಾರೂ ಜಿಲ್ಲಾ ಬಂದ್ ಗೆ ಕರೆಕೊಡಲಿಲ್ಲ. ಜಿಲ್ಲೆಯ ನೈಜ ಸಮಸ್ಯೆಗಳನ್ನು ಬದಿಗೊತ್ತಿ ಎತ್ತಿನ ಹೊಳೆ ಯೋಜನೆಯನ್ನು ಜನರ ಶತ್ರುವನ್ನಾಗಿ ಮಾಡಿ ರಾಜಕೀಯ ನಡೆಸಲಾಗುತ್ತಿದೆ. ಇದನ್ನು ಜನರು ಅರ್ಥಮಾಡಿಕೊಂಡು ಜಿಲ್ಲೆಯ ಉಳಿವಿಗೆ ಸಿಪಿಎಂ ದಾರಿಯನ್ನು ಅನುಸರಿಸುವುದು ಉತ್ತಮ. ನೀರಿನ ಸಮಸ್ಯೆ ವಿರುದ್ಧ ಸರಕಾರದ ವಿರುದ್ದ ಹೋರಾಟ ನಡೆಸದೇ ರಾಜಕೀಯವಾಗಿ ಹೋರಾಡಿ ತಮ್ಮ ಅಸ್ಥಿತ್ವವನ್ನು ಉಳಿಸುವ ಹತಾಶ ಪ್ರಯತ್ನವೇ ಎತ್ತಿನಹೊಳೆ ಹೋರಾಟವಾಗಿದೆ. ಜನರು ನೈಜ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸದಂತೆ ಮಾಡುವುದೇ ಈ ಜಿಲ್ಲಾ ಬಂನ ಉದ್ದೇಶವಾಗಿದೆ ಎಂದು ಅವರು ಆರೋಪಿಸಿದ್ದಾರೆ.