×
Ad

ಮೇ 19ರಂದು ನೇತ್ರಾವತಿ ಉಳಿಸಲು ಸ್ವಯಂಪ್ರೇರಿತ ಜಿಲ್ಲಾ ಬಂದ್‌ಗೆ ಮನವಿ

Update: 2016-05-11 19:48 IST

ಬೆಳ್ತಂಗಡಿ, ಮೇ 11: ಎತ್ತಿನಹೊಳೆ ಎಂಬ ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ನೇತ್ರಾವತಿ ಉಳಿಸಿ ಸಂಯುಕ್ತ ರಕ್ಷಣಾ ಸಮಿತಿ ಮೇ 19 ರಂದು ದ.ಕ ಜಿಲ್ಲಾ ಬಂದ್‌ಗೆ ಕರೆ ನೀಡಿದೆ. ಸ್ವಯಂಪ್ರೇರಿತವಾಗಿ ನಡೆಸುವ ಈ ಬಂದ್‌ಗೆ ತಾಲೂಕಿನ ಎಲ್ಲಾ ಜನತೆ ಪಕ್ಷಾತೀತವಾಗಿ ಸಂಪೂರ್ಣ ಸಹಕಾರ ನೀಡಬೇಕು ಎಂದು ಸಮಿತಿ ತಾಲೂಕು ಸಂಚಾಲಕ ಪುಷ್ಪರಾಜ ಶೆಟ್ಟಿ ವಿನಂತಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ. 16 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ನಡೆಯಲಿದ್ದು ತಾಲೂಕಿನಿಂದ ನೂರಾರು ಮಂದಿ ಭಾಗವಹಿಸಲಿದ್ದಾರೆ. ಬಂದ್ ಹೋರಾಟದ ಬಗ್ಗೆ ಸಮಾಲೋಚನೆ ಸಭೆ ನಡೆದಿದ್ದು 16ಕ್ಕೂ ಅಧಿಕ ಸಂಘಟನೆಗಳ ಪ್ರಮುಖರು ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ. ನೇತ್ರಾವತಿ ಉಳಿಸಲು ನಡೆಯುವ ಎಲ್ಲಾ ಹೋರಾಟಗಳಿಗೆ ಸಮಿತಿಯ ಬೆಂಬಲ ಇದೆ ಎಂದರು.

ಯೋಜನೆಯ ಮೂಲಕ ಸಸ್ಯಶ್ಯಾಮಲೆಯಾಗಿರುವ ದ.ಕ.ಜಿಲ್ಲೆಯನ್ನು ಬರಡಾಗಿಸಲು ರಾಜಕಾರಣಿಗಳು ಟೊಂಕಕಟ್ಟಿ ಸಜ್ಜಾಗಿದ್ದಾರೆ. ಯೋಜನೆಯಿಂದ ಜಿಲ್ಲೆಗೆ ಹಾನಿಯಿಲ್ಲ ಎಂದು ಸರಕಾರ ಹೇಳುತ್ತಿದೆ. ಆದರೆ ಸಚಿವರು, ಶಾಸಕರು, ಸಂಸದರು ಹೇಗೆ ಹಾನಿಯಿಲ್ಲ ಎಂಬುದನ್ನು ಜನತೆಯ ಮುಂದಿಡಲು ಮುಂದೆ ಬರುತ್ತಿಲ್ಲ. ಈಗಾಗಲೇ ಜಿಲ್ಲೆಯಾದ್ಯಂತ ಬರದ ಛಾಯೆ ಆವರಿಸುತ್ತಿದೆ. ಖಾಸಗಿ ಬಾವಿ, ಕೊಳವೆ ಬಾವಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಜಿಲ್ಲಾಡಳಿತ ಆದೇಶಿಸಿದೆ. ತೋಟಗಳಿಗೆ ನೀರುಣಿಸದಂತೆ ಸೂಚಿಸಿದೆ. ಆದ್ದರಿಂದ ಮನೆಯ ಬಾವಿಯಲ್ಲಿ ನೀರಿದೆ ಎಂದು ಸುಮ್ಮನಿರುವ ಜನರೂ ಈ ಬಾರಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ ಬಂದಿದೆ ಎಂದ ಅವರು ಜಿಲ್ಲೆಯ ಜನತೆಯ ಉಳಿವಿಗಾಗಿ, ನದಿ ರಕ್ಷಣೆಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ. ಇದು ಯಾವುದೇ ಪಕ್ಷದ ವಿರುದ್ದ ಅಥವಾ ಪರವಾದ ಹೋರಾಟ ಅಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ, ವಕೀಲ ಶಶಿಕಿರಣ್ ಜೈನ್, ಪತ್ರಕರ್ತ ಶಿಬಿ ಧರ್ಮಸ್ಥಳ, ಕೋಶಾಧಿಕಾರಿ ವಕೀಲ ಹರೀಶ್ ಪೂಂಜ ಉಪಸ್ಥಿತದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News