ಮೇ 16ರಂದು ನಡೆಯುವ ಪ್ರತಿಭಟನೆಯಲ್ಲಿ ಎಲ್ಲರೂ ಭಾಗವಹಿಸಬೇಕು: ಹರಿಕೃಷ್ಣ ಬಂಟ್ವಾಳ
ಬಂಟ್ವಾಳ, ಮೇ 11: ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಉಳಿಸುವ ನಿಟ್ಟಿನಲ್ಲಿ ಮೇ 16 ರಂದು ದ.ಕ. ಜಿಲ್ಲಾ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ನೇತೃತ್ವದಲ್ಲಿ ನಡೆಯಲಿರುವ ಮಂಗಳೂರು ಚಲೋ ಪ್ರತಿಭಟನಾ ಜಾಥದಲ್ಲಿ ತಾಲೂಕಿನ 84 ಗ್ರಾಮಗಳಿಂದಲೂ ಗ್ರಾಮಸ್ಥರು ಭಾಗವಹಿಸುವಂತೆ ಸಮಿತಿಯ ಮಾರ್ಗದರ್ಶಕ ಮಂಡಳಿ ಸದಸ್ಯ ಹರಿಕೃಷ್ಣ ಬಂಟ್ವಾಳ್ ಕರೆ ನೀಡಿದ್ದಾರೆ.
ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಜಾಥದಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಸೇರಿದಂತೆ ಎಲ್ಲರೂ ಜಾತಿ, ಮತ, ಪಕ್ಷ ಬೇದ ಮರೆತು ಪಾಳ್ಗೊಳ್ಳುವಂತೆ ಮನವಿ ಮಾಡಿದರು. ಜಿಲ್ಲೆಯ ಸಚಿವರು ಸಹಿತ ರಾಜಕೀಯ ನಾಯಕರು ಓಟು, ತಮ್ಮ ಅಧಿಕಾರ ಉಳಿಸಿಕೊಳ್ಳುವ ಚಿಂತನೆ ನಡೆಸುತ್ತಿದ್ದಾರೆ. ರಾಜಕೀಯ ನಾಯಕರುಗಳು ಮತ ನೀಡಿದ ಜನರ ಹಿತವನ್ನು ಮರೆತಿದ್ದಾರೆ. ಹೃದಯವಂತಿಕೆಯಿಂದ ಮಾತ್ರ ನೇತ್ರಾವತಿ ನದಿಯನ್ನು ಉಳಿಸಲು ಸಾಧ್ಯ ಎಂದ ಅವರು ಜಿಲ್ಲೆಯ ಭವಿಷ್ಯದ ದಿನಗಳನ್ನು ಗಮನದಲ್ಲಿರಿಸಿ ಹೋರಾಟದಲ್ಲಿ ಬಾಗವಹಿಸಬೇಕಾಗಿದೆ ಎಂದರು.
ಇದೇ ಮೊದಲ ಬಾರಿಗೆ ನೇತ್ರಾವತಿಗೆ ಇಂತಹ ಬರದ ಸ್ಥಿತಿ ನಿರ್ಮಾಣವಾಗಿದೆ. ಇದೇ ಸ್ಥಿತಿ ಮುಂದುವರಿದರೆ ದ.ಕ.ಜಿಲ್ಲೆಗೂ ಭಯಾನಕ ಬರದ ಗಂಡಾಂತರ ಎದುರಾದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಆತಂಕ ವ್ಯಕ್ತ ಪಡಿಸಿದ ಅವರು ಈಗಾಗಲೇ ಈ ಯೋಜನೆಯನ್ನು ವಿರೋಧಿಸಿ ಹಲವಾರು ಸಂಘಟನೆಗಳು ಹೋರಾಟ ನಡೆಸಿದರೂ ಕರ್ನಾಟಕ ಸರಕಾರ ಎಚ್ಚೆತ್ತುಕೊಂಡಿಲ್ಲ. ಈ ಹೋರಾಟಕ್ಕೂ ಮಣಿಯದಿದ್ದಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲು ಸಮಿತಿ ನಿರ್ಧರಿಸಿರುವುದಾಗಿ ಅವರು ತಿಳಿಸಿದರು.
ಶೇ. 70ರಷ್ಟು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಶೇ. 30ರಷ್ಟು ಬಂಟ್ವಾಳ ತಾಲೂಕಿನ ಜನರು ನೇತ್ರಾವತಿ ನದಿಯನ್ನು ಬಳಸಿಕೊಳ್ಳುತ್ತಿದ್ದರೂ ಈ ಯೋಜನೆಯ ದುಷ್ಪರಿಣಾಮದ ಬಗ್ಗೆ ಇನ್ನೂ ಎಚ್ಚೆತ್ತುಕೊಂಡಿಲ್ಲ. ಯಾವುದು ಹಕ್ಕು, ಯಾವುದು ಹೋರಾಟ ಎನ್ನುವುದು ಬುದ್ಧಿವಂತರ ಜಿಲ್ಲೆಯ ಜನತೆಗೆ ತಿಳಿಯದಿರುವುದು ವಿಷಾದನೀಯ ಎಂದರು. ಮುಖ್ಯಮಂತ್ರಿಯವರು ಸಮಿತಿ ಮುಖಂಡರೊಂದಿಗೆ ಚರ್ಚಿಸಿ ಯೋಜನೆಯನ್ನು ರದ್ದುಗೊಳಿಸಿದರೆ ತಮ್ಮ ಹೋರಾಟವನ್ನು ಹಿಂತೆಗೆದುಕೊಂಡು ತಮ್ಮ ಸಮಿತಿಯನ್ನು ಬರ್ಖಾಸ್ತುಗೊಳಿಸುವುದಾಗಿ ತಿಳಿಸಿದರು.
ಮೇ 19ರಂದು ಜಿಲ್ಲಾ ಬಂದ್
ಮೇ16ರಂದು ಮಧ್ಯಾಹ್ನ 3 ಗಂಟೆಯಿಂದ ಮಂಗಳೂರು ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥ ನಡೆಯಲಿದ್ದು ಪ್ರತಿಭಟನಾ ಸಭೆ ಜರಗಲಿರುವುದು. ಈ ಜಾಥದಲ್ಲಿ ಜಿಲ್ಲೆಯ ಜನರು ಸಹಸ್ರಾರು ಸಂಖ್ಯೆಯಲ್ಲಿ ಬಾಗವಹಿಸುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಈಗಾಗಲೇ ಸಮಾಲೋಚನಾ ಸಭೆ ನಡೆಸಿ ಜನಜಾಗೃತಿ ಮೂಡಿಸಲಾಗಿದೆ. ಸಾರ್ವಜನಿಕರು, ನೇತ್ರಾವತಿ ನದಿ ಬಳಕೆದಾರರು, ರೈತರು ಸ್ವಯಂ ಪ್ರೇರಿತರಾಗಿ ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕೋರಿದ ಅವರು, ಇದಕ್ಕೂ ಸರಕಾರ ಸೂಕ್ತ ಸ್ಪಂದನೆ ನೀಡದಿದ್ದಲ್ಲಿ ಮೇ 19 ರಂದು ಸ್ವಯಂ ಪ್ರೇರಿತ ಜಿಲ್ಲಾ ಬಂದ್‌ಗೆ ಕರೆ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಪ್ರಮುಖರಾದ ಜಿ.ಆನಂದ, ಪಿ.ಎ.ರಹೀಂ, ಪ್ರಭಾಕರ ದೈವಗುಡ್ಡೆ, ಶಾಹುಲ್ ಹಮೀದ್ ಉಪಸ್ಥಿತರಿದ್ದರು.