ರಥಶಿಲ್ಪಿ ಅಶ್ವತ್ಥಪುರ ಬಾಬುರಾಯ ಆಚಾರ್ಯರಿಗೆ ಗ್ರಾಮಸಭಾ ಗೌರವ
ಮೂಡುಬಿದಿರೆ, ಮೇ 11: ಇಲ್ಲಿನ ತೆಂಕಮಿಜಾರು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ದ್ವಿತಿಯ ಸಾಲಿನ ಗ್ರಾಮಸಭೆಯಲ್ಲಿ ರಥಶಿಲ್ಪಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅಶ್ವತ್ಥಪುರ ಬಾಬುರಾಯ ಆಚಾರ್ಯರಿಗೆ ಗ್ರಾಮ ಸಭಾ ಗೌರವವನ್ನು ನೀಡಿ ಗೌರವಿಸಲಾಯಿತು.
ಕಳೆದ ವರ್ಷ ಯಕ್ಷಗಾನದ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪರಿಗೆ ಈ ಗೌರವವನ್ನು ನೀಡುವ ಮೂಲಕ ಈ ಪುರಸ್ಕಾರವನ್ನು ಆರಂಭಿಸಲಾಗಿದ್ದು, ಗ್ರಾ.ಪಂ.ವ್ಯಾಪ್ತಿಯಲ್ಲಿರುವ ಸಾಧಕರನ್ನು ಗುರುತಿಸುವ ಉತ್ತಮ ಕೆಲಸವನ್ನು ಪಂಚಾಯತ್ ಮಾಡುತ್ತಾ ಬರುತ್ತಿದೆ.
ಸರಕಾರಿ ಶಾಲೆಗಳಿಗೂ ಬಸ್ಸಿನ ವ್ಯವಸ್ಥೆ ಕಲ್ಪಿಸಿ
ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲಿ ಮಕ್ಕಳಿಗೆ ಬೇಕಾದ ಸೌಕರ್ಯಗಳು ಕೂಡಾ ಹೆಚ್ಚಿವೆ ಅಲ್ಲದೆ ಮಕ್ಕಳಿಗೆ ಹೋಗಿ ಬರಲು ಬಸ್ಸಿನ ವ್ಯವಸ್ಥೆಯೂ ಇದೆ. ಆದ್ದರಿಂದ ಸರಕಾರಿ ಶಾಲೆಗಳಿಗೂ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿದರೆ ಶಾಲೆಗೆ ಬರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಬಹುದೆಂದು ಸದಸ್ಯ ರಮೇಶ್ ಶೆಟ್ಟಿ ಶಿಕ್ಷಣ ಇಲಾಖಾಧಿಕಾರಿಗಳನ್ನು ಆಗ್ರಹಿಸಿದರು. ಸರಕಾರಿ ಶಾಲೆಗಳಿಗೆ ಬಸ್ಸಿನ ವ್ಯವಸ್ಥೆಯನ್ನು ಮಾಡುವ ಯೋಜನೆಗಳು ಬಂದಿಲ್ಲ. ಶಾಲೆಗೆ ಬರುವ ಕೆಲವು ಮಕ್ಕಳಿಗೆ ವಾಹನದ ಚಾರ್ಜನ್ನು ನೀಡಲಾಗುವುದು. ಮುಂದೆ ಈ ಬಗ್ಗೆ ಗ್ರಾಮಸಭೆಯಲ್ಲಿ ಬಂದ ಮನವಿಯನ್ನು ಸರಕಾರದ ಗಮನಕ್ಕೆ ತರಲಾಗುವುದೆಂದು ಶಿಕ್ಷಣ ಇಲಾಖೆಯ ರಾಜಶ್ರೀ ತಿಳಿಸಿದರು.
ಮೆಸ್ಕಾಂ ಇಲಾಖೆಯಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ, ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ಸಣ್ಣ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ಚರ್ಚೆ ನಡೆಯಿತು.
ನೀರಿನ ಸಮಸ್ಯೆಯಿಲ್ಲ
ನೀರಿಲ್ಲ ಎಂದು ಪ್ರತಿ ವರ್ಷವೂ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಪಂಚಾಯತ್‌ನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆದರೆ ಈ ಬಾರಿ ನೀರಿಲ್ಲ ಎಂಬ ಮಾತು ಗ್ರಾಮಸಭೆಯಲ್ಲಿ ಕೇಳಿ ಬಂದಿಲ್ಲ. ಕಾರಣ ಕಳೆದ ಮಳೆಗಾಲದ ಸಮಯದಲ್ಲಿ ನೂತನ ಮಾದರಿಗಳಲ್ಲಿ ಅಣೆಕಟ್ಟುಗಳಲ್ಲಿ ನೀರು ನಿಲ್ಲುವಂತೆ ಮಾಡಿರುವುದರಿಂದ ನೀರಿನ ಸಮಸ್ಯೆ ಪಂಚಾಯತ್ ವ್ಯಾಪ್ತಿಗೆ ಬಾಧಿಸಿಲ್ಲದಿರುವುದು ಗ್ರಾಮಸ್ಥರಿಗೆ ಸಂತಸ ನೀಡಿದೆ.
ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಹೇಮಾವತಿ ಹಾಗೂ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಸ್ವಾಗತಿಸಿ ಜಮಾ ಖರ್ಚಿನ ವರದಿ ಮಂಡಿಸಿದರು. ಸಿಬಂದಿ ರಾಕೇಶ್ ಭಟ್ ವಾರ್ಷಿಕ ವರದಿ ನೀಡಿದರು.