ತನ್ನ ಪಕ್ಷದವರಿಗೇ ಬೇಡವಾದ ಟ್ರಂಪ್ ಗೆ ' ಹಿಂದೂ ಸೇನಾ' ಬೆಂಬಲ !
ಗೂಂಡಾಗಿರಿ , ದಾಳಿ , ಹಲ್ಲೆಗಳ ಮೂಲಕ ಕುಖ್ಯಾತಿ ಪಡೆದಿರುವ ' ಹಿಂದೂ ಸೇನಾ ' ಎಂಬ ಹೆಸರಿನ ಸಂಘಟನೆ ಇದೀಗ ಇನ್ನೊಂದು ವಿಚಿತ್ರ ಕೆಲಸಕ್ಕಾಗಿ ಸುದ್ದಿಯಲ್ಲಿದೆ. ಅಮೇರಿಕಾದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗಬೇಕು ಎಂದು ಅದು ಹೋಮ , ಹವನ ನಡೆಸಿದೆ. ' ಇಸ್ಲಾಮಿಕ್ ಭಯೋತ್ಪಾದನೆ ' ಯನ್ನು ನಿರ್ಮೂಲನೆ ಮಾಡಲು ಟ್ರಂಪ್ ಅಮೇರಿಕ ಅಧ್ಯಕ್ಷರಾದರೆ ಮಾತ್ರ ಸಾಧ್ಯ. ಹಾಗಾಗಿ ಅವರು ಅಧ್ಯಕ್ಷರಾಗಲು ಇರುವ ಎಲ್ಲ ಅಡ್ಡಿ, ಆತಂಕಗಳು ನಿವಾರಣೆಯಾಗುವಂತೆ ಈ ವಿಶೇಷ ಪೂಜೆಯನ್ನು ದಿಲ್ಲಿಯ ಜಂತರ್ ಮಂತರ್ ನಲ್ಲಿ ' ಹಿಂದೂ ಸೇನಾ ' ಹಮ್ಮಿಕೊಂಡಿತ್ತು.
" ಡೊನಾಲ್ಡ್ ಟ್ರಂಪ್ ಝಿಂದಾಬಾದ್ ", "ಡೊನಾಲ್ಡ್ ಟ್ರಂಪ್ ಆಯೇಗಾ , ಇಸ್ಲಾಮಿಕ್ ಆತಂಕ್ ವಾದ್ ಖತಂ ಹೋಗಾ " ಎಂಬ ಘೋಷಣೆಗಳು ಈ ಸಂದರ್ಭದಲ್ಲಿ ಮೊಳಗಿದವು. ಮಧ್ಯದಲ್ಲಿ ಹನುಮಂತನ ಚಿತ್ರ, ಪಕ್ಕದಲ್ಲಿ ಡೊನಾಲ್ಡ್ ಟ್ರಂಪ್ ಹಾಗು ' ಹಿಂದೂ ಸೇನಾ ' ಅಧ್ಯಕ್ಷ ವಿಷ್ಣು ಗುಪ್ತಾ ಚಿತ್ರಗಳನ್ನು ಇಡಲಾಗಿತ್ತು. " ವಿ ಲವ್ ಟ್ರಂಪ್ " ಘೋಷಣೆ ಇರುವ ಪೋಸ್ಟರ್ ಗಳನ್ನೂ ಕೆಲವರು ಹಿಡಿದುಕೊಂಡಿದ್ದರು.
ಅಮೇರಿಕಾದಲ್ಲಿ ತಮ್ಮ ಪಕ್ಷದವರಿಂದಲೇ ಬೆಂಬಲ ಪಡೆಯಲು ಹೆಣಗಾಡುತ್ತಿರುವ ಟ್ರಂಪ್ ಗೆ ಈ ಸುದ್ದಿ ಖಂಡಿತ ಖುಷಿ ನೀಡಬಹುದು .