×
Ad

ಮುಡಿಪು: ಮೇ 14ರಂದು ಮಜ್ಲಿಸ್ ಎಜುಪಾರ್ಕ್‌ಗೆ ಶಿಲಾನ್ಯಾಸ, ಸುನ್ನಿ ಮಹಾಸಮ್ಮೇಳನ

Update: 2016-05-11 20:51 IST

ಕೊಣಾಜೆ, ಮೇ 11: ಮುಡಿಪುವಿನ ಮಜ್ಲಿಸ್ ಎಜುಪಾರ್ಕ್ ಸಂಘಟನೆಯ ಆಶ್ರಯದಲ್ಲಿ ಸೈಯದ್ ಆದೂರು ತಂಙಳ್‌ರ ನೇತೃತ್ವದಲ್ಲಿ ಮಜ್ಲಿಸ್ ಎಜುಪಾರ್ಕ್ ಹಾಗೂ ಸುಸಜ್ಜಿತ ಆಡಿಟೋರಿಯಂಗೆ ಶಿಲಾನ್ಯಾಸ ಮತ್ತು ಸುನ್ನೀ ಮಹಾ ಸಮ್ಮೇಳನವು ಮೇ 14ರಂದು ಸಂಜೆ 4 ಗಂಟೆಗೆ ಮುಡಿಪುವಿನ ಬಾಳೆಪುಣಿ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.

ಶಿಕ್ಷಣ ಕ್ಷೇತ್ರಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯ ಇರುವ ಇಂದಿನ ಕಾಲದಲ್ಲಿ ನಮ್ಮ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಕಾನೂನು ಕಾಲೇಜು ಹಾಗೂ ಇತರ ಶಿಕ್ಷಣ ಸಂಸ್ಥೆಗಳು ಬಹಳಷ್ಟು ಇವೆ. ಆದರೆ ಸರಕಾರಿ ಉನ್ನತ ದರ್ಜೆಗೆ ಅವಶ್ಯಕವಾಗಿರುವಂತಹ ಐಎಎಸ್, ಐಪಿಎಸ್, ಐಎಫ್‌ಎಸ್ ಪರೀಕ್ಷೆಗಳಿಗೆ ತರಬೇತಿ ನೀಡುವಂತಹ ಶಿಕ್ಷಣ ಸಂಸ್ಥೆಗಳು ಬಹಳಷ್ಟು ಕಡಿಮೆ ಇವೆ. ಈ ನಿಟ್ಟಿನಲ್ಲಿ ಅತ್ಯಂತ ಕಡುಬಡವರ ಮಕ್ಕಳಿಗೂ 7ನೆ ತರಗತಿಯಿಂದಲೇ ಇಂತಹ ಪರೀಕ್ಷೆಗಳಿಗೆ ವಿಶೇಷ ತರಬೇತಿ ಕೊಟ್ಟು  ರಾಜ್ಯ, ರಾಷ್ಟ್ರಕ್ಕೆ ಅವರ ಸೇವೆ ಲಭಿಸುವಂತೆ ಮುಡಿಪುವಿನ ಮಜ್ಲಿಸ್ ಎಜುಪಾರ್ಕ್ ಸಂಘಟನೆಯು ಚಿಂತನೆ ನಡೆಸಿದೆ.

ಮಜ್ಲಿಸ್ ಎಜುಪಾರ್ಕ್ ವಿದ್ಯಾಸಂಸ್ಥೆಗೆ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಶಿಲಾನ್ಯಾಸವನ್ನು ನೆರವೇರಿಸಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಪೆರೋಡ್ ಉಸ್ತಾದ್, ಅಲಿಕುಂಞಿ ಉಸ್ತಾದ್, ಖಾಝಿ ಕೂರತ್ ತಂಙಳ್, ಬೇಕಲ್ ಉಸ್ತಾದ್, ಅಬ್ದಾಸ್ ಉಸ್ತಾದ್, ಮಾಣಿ ಉಸ್ತಾದ್, ಆರೋಗ್ಯ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಮೊಯ್ದಿನ್ ಬಾವ, ಯೆನೆಪೊಯ ವಿವಿಯ ಅಬ್ದುಲ್ಲಾ ಕುಂಞಿ ಹಾಜಿ, ಕಣಚೂರು ಮೆಡಿಕಲ್ ಕಾಲೇಜಿನ ಯು.ಕೆ.ಮೋನು ಹಾಗೂ ಇನ್ನಿತರ ಉಲಮಾ-ಉಮರಾ ನಾಯಕರುಗಳು, ರಾಜಕೀಯ ಸಾಮಾಜಿಕ ಮುಖಂಡರು ಬಾಗವಹಿಸಲಿದ್ದಾರೆ ಎಂದು ಮುಡಿಪು ಮಜ್ಲಿಸ್ ಎಜುಪಾರ್ಕ್ ಸಂಘಟನೆಯ ಅಧ್ಯಕ್ಷ ಸೈಯದ್ ಆದೂರು ತಂಙಳ್, ಕಾರ್ಯಾಕಾರಿ ಅಧ್ಯಕ್ಷ ಎಸ್.ಕೆ.ಖಾದರ್ ಹಾಜಿ ಹಾಗೂ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News