ತಾಪಂ ಸದಸ್ಯೆ ವಿರುದ್ಧ ಅರಣ್ಯ ಇಲಾಖೆಯ ಮರಗಳನ್ನು ಕಡಿದ ಆರೋಪ: ಅರಣ್ಯಾಧಿಕಾರಿಯಿಂದ ಪರಿಶೀಲನೆ

Update: 2016-05-11 17:02 GMT

ಮುಲ್ಕಿ, ಮೇ 11: ಕಟೀಲು ಪಂಚಾಯತ್ ವ್ಯಾಪ್ತಿಯ ಮಲ್ಲಿಗೆಯಂಗಡಿ ಬಳಿ ಅರಣ್ಯ ಇಲಾಖೆಗೆ ಸೇರಿದ ಮರಗಳನ್ನು ಪಂಚಾಯತ್ ಪರವಾನಿಗೆ ಇಲ್ಲದೆ ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯೆ ಅಕ್ರಮವಾಗಿ ಕಡಿದು ಮಾರಾಟ ಮಾಡಿದ್ದಾರೆ ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದ ಹಿನ್ನೆಲೆ ಮುಲ್ಕಿ ವಲಯದ ಪ್ರಭಾರ ಅರಣ್ಯ ಇಲಾಖಾಧಿಕಾರಿ ಪ್ರಕಾಶ್ ಶೆಟ್ಟಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ಕಟೀಲು ಪಂಚಾಯತ್ ವ್ಯಾಪ್ತಿಯ ಮಲ್ಲಿಗೆಯಂಗಡಿ-ಗುಡಿಗೆರೆಬೆನ್ನಿಗೆ ರಸ್ತೆಯಲ್ಲಿ ಕಟೀಲು ತಾಲೂಕು ಪಂಚಾಯತ್ ಸದಸ್ಯೆ ಶುಭಲತಾರ ಮನೆಯಿದ್ದು ರಸ್ತೆ ಮಾಡಿಕೊಡಬೇಕೆಂದು ಸ್ಥಳೀಯರ ಸಹಿ ತೆಗೆದುಕೊಂಡು ರಸ್ತೆಯಲ್ಲಿ ಇರುವ ಅರಣ್ಯ ಇಲಾಖೆಯ ಮರಗಳನ್ನು ಕಡಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅನೇಕ ಸ್ಥಳೀಯರ ಸಹಿ ಸಂಗ್ರಹಿಸಿಕೊಂಡಿದ್ದ ಶುಭಲತಾ ತನ್ನ ಮನೆಯವರೆಗೆ ಮಾತ್ರ ರಸ್ತೆ ಮಾಡಿಸಿಕೊಂಡು ಉಳಿದ ಸ್ಥಳೀಯರನ್ನು ಕಡೆಗಣಿಸಿದ್ದರು. ಅಲ್ಲದೆ, ಈಗ ತಾಲೂಕು ಪಂಚಾಯತ್‌ನ ಸದಸ್ಯೆಯಾಗಿ ಆಯ್ಕೆಗೊಂಡಿರುವ ಶುಭಲತಾ ರಸ್ತೆಯಲ್ಲಿರುವ ಬೆಲೆಬಾಳುವ ಮರಗಳನ್ನು ಗುತ್ತಿಗೆದಾರರೊಬ್ಬರಿಗೆ ವಹಿಸಿ ಕಡಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತಾಲೂಕು ಪಂಚಾಯತ್ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅರಣ್ಯ ಇಲಾಖೆಯ ಮರಗಳನ್ನು ಅಕ್ರಮವಾಗಿ ಕಡಿಸಿರುವ ಕಟೀಲು ಬಿಜೆಪಿ ತಾಲೂಕು ಪಂಚಾಯತ್ ಸದಸ್ಯೆಯ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ ಎಂಬ ಮಾತುಗಳು ಸ್ಥಳೀಯವಾಗಿ ಕೇಳಿ ಬರುತ್ತಿವೆ.

ಅಕ್ರಮವಾಗಿ ಮರ ಕಡಿದ ಬಗ್ಗೆ ಸ್ಥಳೀಯರ ದೂರನ್ನು ಪರಿಶೀಲಿಸಿ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿ ಪ್ರಕಾಶ್ ಶೆಟ್ಟಿ ಮಾಧ್ಯಮದವರೊಡನೆ ಮಾತನಾಡಿ, ಇಲಾಖಾ ಅಧೀನದಲ್ಲಿದ್ದ ಮರಗಳನ್ನು ಪರವಾನಿಗೆ ಇಲ್ಲದೆ ಕಡಿದು ಮಾರಾಟ ಮಾಡಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಬಗ್ಗೆ ಸ್ಥಳೀಯರ ದೂರನ್ನು ಪರಿಶೀಲಿಸಿ ಮರ ಕಡಿದ ಗುತ್ತಿಗೆದಾರ ಹಾಗೂ ಅವರಿಗೆ ಕಡಿಯಲು ತಿಳಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News