‘ರಿಯೋ ಗೇಮ್ಸ್‌ನಿಂದ ಸುಶೀಲ್‌ಕುಮಾರ್‌ರನ್ನು ಕೈಬಿಟ್ಟಿಲ್ಲ’
ಹೊಸದಿಲ್ಲಿ, ಮೇ 12: ಭಾರತದ ಹಿರಿಯ ಕುಸ್ತಿಪಟು ಸುಶೀಲ್ ಕುಮಾರ್‌ರನ್ನು ಮುಂಬರುವ ರಿಯೋ ಗೇಮ್ಸ್‌ನಿಂದ ಕೈಬಿಡಲಾಗಿಲ್ಲ. ಭಾರತದ ಒಲಿಂಪಿಕ್ಸ್ ಸಂಸ್ಥೆಗೆ (ಐಒಎ)ಯಾವುದೇ ಸಂಭಾವ್ಯ ಪಟ್ಟಿಯನ್ನು ಕಳುಹಿಸಿಕೊಟ್ಟಿಲ್ಲ ಎಂದು ಭಾರತದ ಕುಸ್ತಿ ಫೆಡರೇಶನ್(ಡಬ್ಲುಎಫ್‌ಐ) ಗುರುವಾರ ಸ್ಪಷ್ಟಪಡಿಸಿದೆ.
ವಿಶ್ವದ ಕುಸ್ತಿ ಆಡಳಿತ ಮಂಡಳಿಯಾದ ಯುನೈಟೆಡ್ ಕುಸ್ತಿ ಫೆಡರೇಶನ್ ವಿವಿಧ ಒಲಿಂಪಿಕ್ಸ್ ಅರ್ಹತಾ ಟೂರ್ನಿಗಳಲ್ಲಿ ಸಂಬಂಧಪಟ್ಟ ತೂಕ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಸ್ಥಾನ ಗಿಟ್ಟಿಸಿಕೊಂಡ ಪಟ್ಟಿಯನ್ನು ಐಒಎಗೆ ಕಳುಹಿಸಿಕೊಡುವುದು ನಿರಂತರವಾಗಿ ನಡೆದುಬಂದಿರುವ ಪ್ರಕ್ರಿಯೆಯಾಗಿದೆ ಎಂದು ಡಬ್ಲುಎಫ್‌ಐ ಸ್ಪಷ್ಟಪಡಿಸಿದೆ.
ಸಂಭಾವ್ಯ ಪಟ್ಟಿಯಲ್ಲಿ ಸುಶೀಲ್ ಹೆಸರು ಇಲ್ಲದೇ ಇದ್ದರೆ ಅವರು ರಿಯೋ ಗೇಮ್ಸ್‌ಗೆ ತೆರಳುವುದಿಲ್ಲ ಎಂಬ ಅರ್ಥವಲ್ಲ. ಟ್ರಯಲ್ಸ್ ನಡೆಸುವ ಬಗ್ಗೆ ಅಧ್ಯಕ್ಷರಾದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಡಬ್ಲುಎಫ್‌ಐ ಹೇಳಿದೆ.
‘‘ಸಂಭಾವ್ಯ ಪಟ್ಟಿಯನ್ನು ಯುನೈಟೆಡ್ ಕುಸ್ತಿ ಫೆಡರೇಶನ್ ಕಳುಹಿಸಿಕೊಡಲಿದೆ. ಎಲ್ಲ ಟ್ರಯಲ್ಸ್‌ಗಳು ಮುಗಿದ ಬಳಿಕ ವಿಶ್ವ ಕುಸ್ತಿ ಆಡಳಿತ ಮಂಡಳಿಯು ವಿವಿಧ ವಿಭಾಗಗಳಲ್ಲಿ ವಿವಿಧ ಟೂರ್ನಿಗಳ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದವರ ಪಟ್ಟಿಯನ್ನು ಸಂಬಂಧಿತ ಒಲಿಂಪಿಕ್ಸ್ ಫೆಡರೇಶನ್‌ಗಳಿಗೆ ಕಳುಹಿಸಿಕೊಡಲಿದೆ’’ಎಂದು ಡಬ್ಲುಎಫ್‌ಐ ಕಾರ್ಯದರ್ಶಿ ವಿನೋದ್ ಥೋಮರ್ ಪಿಟಿಐಗೆ ತಿಳಿಸಿದ್ದಾರೆ.