ಇಂದು ಸಂಜೆಯಿಂದ ಮನಪಾದ 11 ವಾರ್ಡ್‌ಗಳಿಗೆ ಲಕ್ಯಾ ಡ್ಯಾಂ ನೀರು
ಮಂಗಳೂರು, ಮೇ 12: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ನಿರ್ದೇಶನ ಹಾಗೂ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅವರ ಆದೇಶದ ಮೇರೆಗೆ ಈಗಾಗಲೇ ಕುದುರೆಮುಖದ ಲಕ್ಯಾ ಡ್ಯಾಂನಿಂದ ಪಣಂಬೂರು ಪಂಪ್ ಹೌಸ್‌ಗೆ ನೀರು ಪಂಪ್ ಮಾಡಲಾಗುತ್ತಿದ್ದು, ಸಂಜೆಯೊಳಗೆ ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗಳಿಗೆ ಪೂರೈಕೆ ಮಾಡುವ ಕಾರ್ಯ ನಡೆಯಲಿದೆ ಎಂದು ಮನಪಾ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಮನಪಾ ವ್ಯಾಪ್ತಿಯಲ್ಲಿನ ನೀರಿನ ಸಮಸ್ಯೆಗೆ ಸಂಬಂಧಿಸಿ ವಿವಿಧ ಸಂಘ ಸಂಸ್ಥೆಗಳು, ಬಿಲ್ಡರ್ ಅಸೋಸಿಯೇಶನ್‌ಗಳ ಪ್ರತಿನಿಧಿಗಳ ಜತೆಗಿನ ಸಭೆಯ ಬಳಿಕ ಸುದ್ದಿಗಾರರಿಗೆ ಅವರು ಈ ಮಾಹಿತಿ ನೀಡಿದರು. ಮನಪಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಲಕ್ಯಾ ಡ್ಯಾಂನಿಂದ ಕೆಐಒಸಿಎಲ್ ಘಟಕಕ್ಕೆ ಪೈಪ್‌ಲೈನ್ ಮೂಲಕ ಸರಬರಾಜು ಆಗುತ್ತಿರುವ 2 ಎಂಜಿಡಿ ನೀರನ್ನು ಮೇ 31ರವರೆಗೆ ಮನಪಾ ವಾರ್ಡ್‌ಗಳ ಜನರಿಗೆ ಕುಡಿಯಲು ಉಪಯೋಗಿಸಲು ಅನುವು ಮಾಡುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರವರು ನಿನ್ನೆ ಆದೇಶಿಸಿದ್ದರು. ಇದೇ ವೇಳೆ, ನಿನ್ನೆ ಕೇರಳದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕೂಡಾ ಕೆಐಒಸಿಎಲ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ನೀರು ಪೂರೈಕೆಗೆ ಆಗ್ರಹಿಸಿದ್ದರು. ಸ್ಥಳೀಯ ಶಾಸಕ ಮೊಯ್ದಿನ್ ಬಾವಕೂಡಾ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿದ್ದರು. ಅದರಂತೆ ಇದೀಗ ನೀರು ಪಣಂಬೂರು ಪಂಪ್‌ಹೌಸ್‌ಗೆ ಸರಬರಾಜು ಬೆಳಗ್ಗಿನಿಂದಲೇ ಆರಂಭಗೊಂಡಿದ್ದು, ಸಂಜೆಯಿಂದಲೇ ಮನಪಾದ ಸುರತ್ಕಲ್ ಸೇರಿದಂತೆ ಹೊಸಬೆಟ್ಟು, ಕೂಳೂರು, ಕಾಟಿಪಳ್ಳ, ಇಡ್ಯಾ ಮೊದಲಾದ 11 ವಾರ್ಡ್‌ಗಳಿಗೆ ಈ ನೀರನ್ನು ಪೂರೈಕೆ ಮಾಡಲಾಗುವುದು. ಇದರಿಂದ ತುಂಬೆಯಿಂದ ಇತರ ವಾರ್ಡ್‌ಗಳಿಗೆ ನೀರು ಪೂರೈಕೆಯಲ್ಲಿನ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಕೆಐಒಸಿಎಲ್‌ನವರು ಈಗಾಗಲೇ ಈ ನೀರನ್ನು ಕುಡಿಯಲು ಉಪಯೋಗಿಸುತ್ತಿದ್ದಾರೆ. ಹಾಗಿದ್ದರೂ ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಮಂಗಳೂರು ವಿವಿ ಮತ್ತು ಮೀನುಗಾರಿಕಾ ಕಾಲೇಜಿಗೆ ಕಳುಹಿಸಲಾಗಿದೆ ಎಂದು ಡಾ. ಗೋಪಾಲಕೃಷ್ಣ ತಿಳಿಸಿದರು.