×
Ad

ರಸ್ತೆ ವಿಚಾರದಲ್ಲಿ ಇತ್ತಂಡಗಳ ನಡುವೆ ಹೊಡೆದಾಟ: ಮೂವರು ಆಸ್ಪತ್ರೆಗೆ

Update: 2016-05-12 17:04 IST

ಪುತ್ತೂರು, ಮೇ 12: ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ನಡುವೆ ಹೊಡೆದಾಟ ನಡೆದು ಒಂದೇ ಕುಟುಂಬದ ಮೂವರು ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಆನಾಜೆ ಎಂಬಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಆನಾಜೆ ಇಸ್ಮಾಯಿಲ್ ಎಂಬವರ ಪುತ್ರರಾದ ಅಬ್ದುರ್ರಹ್ಮಾನ್ ಹಾಗೂ ಮುಹಮ್ಮದ್ ಶಾಫಿ ಎಂಬವರು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಾದರೆ ಇನ್ನೊಂದು ತಂಡದ ಕೊಡಿಪ್ಪಾಡಿಆನಾಜೆ ಇಸ್ಮಾಯಿಲ್ ಅವರ ಪುತ್ರ ಅಬ್ದುಲ್ ಕರೀಂ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಮ್ಮ ವರ್ಗ ಜಾಗದ ಮೂಲಕ ಮನೆಗೆ ಹೋಗುವ ಖಾಸಗಿ ರಸ್ತೆಗೆ ನಾವು ತಿಂಗಳ ಹಿಂದೆಯಷ್ಟೇ ಕಾಂಕ್ರೀಟಿಕರಣ ಮಾಡಿದ್ದೇವೆ. ಆ ಬಳಿಕ ಸಣ್ಣ ವಾಹನಗಳು ಮಾತ್ರವೇ ಆ ರಸ್ತೆಯ ಮೂಲಕ ಸಂಚರಿಸುತ್ತಿದ್ದವು. ಈ ಮಧ್ಯೆ ನಮ್ಮ ಮನೆ ಪಕ್ಕದಲ್ಲಿರುವ ಅತ್ತೆಯ ಮನೆಗೆ ಟಿಪ್ಪರ್ ಲಾರಿಯಲ್ಲಿ ಹೊಗೆ ತಂದಿದ್ದಾರೆ. ಇದರಿಂದಾಗಿ ಇತ್ತೀಚೆಗೆ ಕಾಂಕ್ರೀಟಿಕರಣಗೊಂಡ ರಸ್ತೆ ಸಂಪೂರ್ಣ ಒಡೆದುಹೋಗಿದೆ. ಇದನ್ನು ಪ್ರಶ್ನಿಸಿರುವುದಕ್ಕೆ ತನ್ನ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ ಕಬ್ಬಿಣದ ರಾಡ್‌ನಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ನನ್ನ ತಮ್ಮ ಮುಹಮ್ಮದ್ ಶಾಫಿ ತಡೆಯಲು ಬಂದಿದ್ದು ಅವರಿಗೂ ಹಲ್ಲೆ ನಡೆಸಿದ್ದಾರೆ ಎಂದು ಅಬ್ದುರ್ರಹ್ಮಾನ್ ಆರೋಪಿಸಿದ್ದಾರೆ.

ನಮ್ಮ ಮನೆಯ ಬಳಿಯಿಂದಾಗಿ ನೆರೆಮನೆಯ ಅಬ್ದುರ್ರಹ್ಮಾನರ ಮನೆಗೆ ರಸ್ತೆ ಹಾದುಹೋಗುತ್ತಿದೆ. ಈ ರಸ್ತೆಗೆ ಕೆಲ ಸಮಯಗಳ ಹಿಂದೆ ಕಾಂಕ್ರೀಟಿಕರಣಗೊಳಿಸಿದ್ದರು. ಕಾಂಕ್ರೀಟಿಕರಣಗೊಂಡ ಬಳಿಕ ಆ ರಸ್ತೆ ಮೂಲಕ ವಾಹನ ಸಂಚಾರ ಮಾಡಬಾರದು ಎಂದು ಅವರು ಆಕ್ಷೇಪ ಮಾಡುತ್ತಿದ್ದರು. ಈ ಮಧ್ಯೆ ನಾವು ಹೊಸ ಮನೆ ನಿರ್ಮಿಸುತ್ತಿದ್ದು, ಕಾಮಗಾರಿಗೆ ಮರಳು ತರುವುದು ಅಗತ್ಯವಾಗಿದ್ದು ಟಿಪ್ಪರ್ ಲಾರಿಯ ಚಾಲಕ ನಮಗೆ ತಿಳಿಸದೇ ಮರಳು ತಂದಿದ್ದಾರೆ. ಇದನ್ನು ಆಕ್ಷೇಪಿಸಿ ಅಬ್ದುರ್ರಹ್ಮಾನ್ ಹಾಗೂ ಆತನ ಸಹೋದರ ಮುಹಮ್ಮದ್ ಶಾಫಿ ಎಂಬವರು ನಮ್ಮ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ನನಗೆ ಹಲ್ಲೆ ನಡೆಸುತ್ತಿರುವುದನ್ನು ಕಂಡು ತಡೆಯಲು ಬಂದ ನನ್ನ ತಾಯಿ ಬೀಪಾತುಮ್ಮನವರಿಗೂ ಹಲ್ಲೆ ನಡೆಸಿರುವುದಾಗಿ ಅಬ್ದುಲ್ ಕರೀಂ ಆರೋಪಿಸಿದ್ದಾರೆ.

ಪುತ್ತೂರು ನಗರ ಪೊಲೀಸರು ಇತ್ತಂಡದ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News