ಬೈಕ್-ಪಿಕಪ್ ಮಧ್ಯೆ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
ಉಪ್ಪಿನಂಗಡಿ, ಮೇ 12: ಬೈಕ್ ಹಾಗು ಪಿಕಪ್ ವಾಹನ ಮುಖಾಮುಖಿ ಢಿಕ್ಕಿಯಾದ ಘಟನೆ ಉರುವಾಲು ಗ್ರಾಮದ ಅಲೆಜ್ಜಿ ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದ್ದು, ಘಟನೆಯಿಂದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಸಹ ಸವಾರ ಗಂಭೀರ ಗಾಯಗೊಂಡಿದ್ದಾರೆ.
ಮಚ್ಚಿನ ಗ್ರಾಮದ ಕುದ್ರಡ್ಕ ನಿವಾಸಿ ಕೆ.ಪಿ. ಅಬ್ದುಲ್ (43) ಸ್ಥಳದಲ್ಲೇ ಮೃತಪಟ್ಟ ಬೈಕ್ ಸವಾರ. ಇವರ ನೆರೆಮನೆಯ ನಿವಾಸಿ ಸಹಸವಾರ ಯಾಕೂಬ್ (45) ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆ.ಪಿ. ಅಬ್ದುಲ್ ಹಾಗೂ ಯಾಕೂಬ್ ಸಂಬಂಧಿಗಳಾಗಿದ್ದು, ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬೆಳ್ತಂಗಡಿ ಕಡೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನ ಇವರ ಬೈಕ್‌ಗೆ ಉರುವಾಲು ಗ್ರಾಮದ ಅಲೆಜ್ಜಿ ಎಂಬಲ್ಲಿ ಮುಖಾಮುಖಿ ಢಿಕ್ಕಿಯಾಗಿದೆ.
ಅಪಘಾತ ನಡೆದಾಗ ಬೈಕ್ ಸಂಪೂರ್ಣ ಪಿಕ್‌ಅಪ್ ವಾಹನದ ಅಡಿಗೆ ನುಗ್ಗಿದ್ದು, ಬೈಕನ್ನು ಕೆಲವು ಮೀಟರ್‌ಗಳ ದೂರ ಪಿಕ್‌ಅಪ್ ಎಳೆದುಕೊಂಡು ಹೋಗಿ ರಸ್ತೆ ಬದಿಯ ಚರಂಡಿಗೆ ಒರಗಿ ನಿಂತಿದೆ. ಇದರಿಂದಾಗಿ ಪಿಕಪ್‌ನಡಿ ಸಿಲುಕಿ ಗಂಭೀರ ಗಾಯಗೊಂಡ ಬೈಕ್ ಸವಾರ ಕೆ.ಪಿ. ಅಬ್ದುಲ್ ಸ್ಥಳದಲ್ಲೇ ಮೃತಪಟ್ಟರೆ, ಸಹಸವಾರ ಯಾಕೂಬ್ ಗಂಭೀರ ಗಾಯಗೊಂಡಿದ್ದಾರೆ.
ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.