ಅಕ್ರಮವಾಗಿ ಡೀಸೆಲ್ ದಾಸ್ತಾನಿಟ್ಟು ಮಾರಾಟ ಮಾಡುತ್ತಿದ್ದಾತನ ಬಂಧನ
ಉಪ್ಪಿನಂಗಡಿ, ಮೇ 12 ಅಕ್ರಮವಾಗಿ ಡೀಸೆಲ್ ದಾಸ್ತಾನಿಟ್ಟು ಮಾರಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ಪೊಲೀಸರು ಬುಧವಾರ ಪತ್ತೆಹಚ್ಚಿದ್ದು, ಓರ್ವನನ್ನು ಬಂಧಿಸಿ 175 ಲೀಟರ್ ಡೀಸೆಲ್ ವಶಕ್ಕೆ ತೆಗೆದುಕೊಂಡಿದ್ದಾರೆ.
ತೆಕ್ಕಾರು ಗ್ರಾಮದ ಚಿಂಗಾಣಿಬೆಟ್ಟು ಮನೆಯ ದಾವೂದ್ (56) ಬಂಧಿತ ಆರೋಪಿ.
ಖಚಿತ ಮಾಹಿತಿಯ ಮೇರೆಗೆ ಚಿಂಗಾಣಿಬೆಟ್ಟುವಿನಲ್ಲಿರುವ ಈತನ ಮನೆಗೆ ದಾಳಿ ನಡೆಸಿದ ಪೊಲೀಸರು, 35 ಲೀಟರ್‌ನ ಐದು ಕ್ಯಾನ್‌ಗಳಲ್ಲಿ ಅಕ್ರಮವಾಗಿ ದಾಸ್ತಾನಿಡಲಾಗಿದ್ದ 175 ಲೀಟರ್ ಡೀಸೆಲ್ ಅನ್ನು ಹಾಗೂ ಮತ್ತೊಂದು ಖಾಲಿ ಕ್ಯಾನ್ ಅನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಮಾರಾಟಕ್ಕಾಗಿ ಡೀಸೆಲನ್ನು ಇಲ್ಲಿ ಅಕ್ರಮವಾಗಿ ದಾಸ್ತಾನಿರಿಸಲಾಗಿತ್ತು ಎನ್ನಲಾಗಿದೆ.
ಪ್ರೊಬೆಷನರಿ ಎಎಸ್ಪಿ ಲಕ್ಷ್ಮಣ್ ನಿಂಬರ್ಗಿ ನಿರ್ದೇಶನದಂತೆ ನಡೆದ ಈ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿ ತಿಮ್ಮಪ್ಪ ನಾಯ್ಕ, ಹೆಡ್‌ಕಾನ್‌ಸ್ಟೇಬಲ್‌ಗಳಾದ ಚೋಮ, ಶ್ರೀಧರ ರೈ, ದೇವದಾಸ್, ಸಿಬ್ಬಂದಿ ಜಗದೀಶ್, ರಾಧಾಕೃಷ್ಣ ಭಾಗವಹಿಸಿದ್ದರು.