×
Ad

ಉಪ್ಪಿನಂಗಡಿ: ಭಾರೀ ಗಾಳಿ, ಮಳೆಗೆ ಅಪಾರ ಹಾನಿ

Update: 2016-05-12 18:20 IST

ಉಪ್ಪಿನಂಗಡಿ, ಮೇ 12: ಕೊಲ ಗ್ರಾಮದ ವಳಕಡಮ ಎಂಬಲ್ಲಿ ಮೇ 11ರಂದು ಭಾರೀ ಗಾಳಿ ಮಳೆಗೆ ಹಲವು ಕಡೆ ಕೃಷಿ ನಾಶವುಂಟಾಗಿದ್ದು, ಅಡಿಕೆ, ಬಾಳೆಗಿಡಗಳು ಧರಾಶಾಹಿಯಾಗಿವೆ. ಹಟ್ಟಿ,ಕೊಟ್ಟಿಗೆ, ವಾಸದ ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದ್ದು, ವಿದ್ಯುತ್ ಕಂಬಗಳೂ ತುಂಡಾಗಿ ಬಿದ್ದಿವೆ.ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ವಳಕಡಮ ಪರಿಸರದಲ್ಲಿ ಮೇ 11ರಂದು ಸಂಜೆ ಭಾರೀ ಮಳೆಯಾಗಿದ್ದು ಇದರೊಂದಿಗೆ ಬೀಸಿದ ಬಿರುಗಾಳಿಗೆ ಸುಮಾರು 15ಕ್ಕೂ ಹೆಚ್ಚು ಕುಟುಂಬಗಳ ಸುಮಾರು 2ಸಾವಿರ ಅಡಿಕೆ ಮರ, 5,00ಕ್ಕೂ ಹೆಚ್ಚು ಬಾಳೆಗಿಡಗಳು ಹಾನಿಗೊಂಡಿವೆ. ಇದರೊಂದಿಗೆ ವಾಸದ ಮನೆ, ಹಟ್ಟಿಗಳ ಹಂಚು, ಸಿಮೆಂಟ್ ಶೀಟ್‌ಗಳೂ ಗಾಳಿಗೆ ಹಾರಿಹೋಗಿವೆ. ಇದರಿಂದಾಗಿ ಅಂದಾಜು 10 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

ವಳಕಡಮ ನಿವಾಸಿ ಎಪಿಎಂಸಿ ಸದಸ್ಯ ಶೀನಪ್ಪಗೌಡರ ತೋಟದಲ್ಲಿ ಸುಮಾರು 200 ಅಡಿಕೆ ಮರಗಳು ಮುರಿದುಬಿದ್ದಿವೆ. ಇವರ ಪಕ್ಕದ ಬಿರ್ಮಿಜಾಲು ನಿವಾಸಿ ಬಾಬು ಗೌಡರ ತೋಟದಲ್ಲಿ ಸುಮಾರು 100 ಅಡಿಕೆ ಮರ ಹಾಗೂ 300ಕ್ಕೂ ಹೆಚ್ಚು ಗೊನೆಬಿಟ್ಟಿದ್ದ ನೇಂದ್ರ ಬಾಳೆಗಿಡಗಳು ಮುರಿದುಬಿದ್ದಿವೆ.

ನಾರಾಯಣ ಗೌಡ ವಳಕಡಮ ಮೇಲಿನ ಮನೆ ಇವರ ತೋಟದಲ್ಲಿಯೂ 100ಕ್ಕೂ ಹೆಚ್ಚು ಅಡಿಕೆ ಮರಗಳು ಮುರಿದುಬಿದ್ದಿವೆ.

ಅಲ್ಲದೇ ಇವರ ತೋಟದಲ್ಲಿ ನಿರ್ಮಿಸಿದ್ದ ಶೆಡ್‌ನ ಶೀಟ್‌ಗಳು ಗಾಳಿಗೆ ಹಾರಿಹೋಗಿವೆ. ಚಿಕ್ಕಯ್ಯ ಗೌಡ ಎಂಬವರ ವಾಸದ ಮನೆಯ ಹಂಚು ಹಾರಿಹೋಗಿದ್ದು ಇವರ ತೋಟದಲ್ಲಿನ ಅಡಿಕೆ, ತೆಂಗಿನಮರಗಳು ಮುರಿದುಬಿದ್ದಿವೆ. ಯತೀಂದ್ರ ಎಂಬವರ ಕೊಟ್ಟಿಗೆ ಸಿಮೆಂಟ್ ಶೀಟ್, ಮನೆಯ ಹಂಚುಗಳು ಹಾನಿಗೊಂಡಿವೆ.

ಧರ್ಣಪ್ಪ ಗೌಡರ 100 ಅಡಿಕೆಮರ, ಕುಕ್ಕೇದಿ ಕೆರೆಂತೇಲ್‌ರವರ 30 ಕೊಕ್ಕೊ ಗಿಡಗಳು, 10ಕ್ಕೂ ಹೆಚ್ಚು ಬಾಳೆಗಿಡಗಳು ಹಾಗೂ 100ಕ್ಕೂ ಹೆಚ್ಚು ಅಡಿಕೆಗಿಡಗಳು ಹಾನಿಗೊಂಡಿವೆ.

ವಳಕಡಮ ದರ್ಖಾಸು ನಿವಾಸಿಗಳಾದ ನೀಲಯ್ಯ ಗೌಡರ ತೋಟದಲ್ಲಿ 75 ಅಡಿಕೆ ಮರ, 25 ಬಾಳೆಗಿಡಗಳು,ತಿಮ್ಮಪ್ಪ ಗೌಡರವರ ತೋಟದಲ್ಲಿ 75 ಅಡಿಕೆ ಮರ, ಜಯಂತ ಯಾನೆ ಜಯಗೌಡರವರ ತೋಟದಲ್ಲಿ ಸುಮಾರು 200 ಅಡಿಕೆ ಮರಗಳು ಗಾಳಿಗೆ ಮುರಿದುಬಿದ್ದಿವೆ.

ಕೆರೆಂತೇಲು ನಿವಾಸಿ ಬಾಲಪ್ಪ ಗೌಡರ ತೋಟದಲ್ಲಿ 15 ಅಡಿಕೆ ಮರಗಳು, 20 ಕೊಕ್ಕೊ ಗಿಡಗಳು, 40ಕ್ಕೂ ಹೆಚ್ಚು ಬಾಳೆ ಗಿಡಗಳು ಹಾನಿಗೊಂಡಿವೆ.ಅಲ್ಲದೇ ಇವರ ವಾಸದ ಮನೆ ಹಾಗೂ ದನದ ಹಟ್ಟಿಯ ಹಂಚುಗಳು ಹಾರಿಹೋಗಿವೆ.

ಮರ್ಕಂಜ ಕೃಷ್ಣಶಾಸ್ತ್ರಿಯವರ ತೋಟದಲ್ಲಿನ 200ಕ್ಕೂ ಹೆಚ್ಚು ಅಡಿಕೆ ಮರಗಳು ಮುರಿದುಬಿದ್ದಿವೆ. ಗುಂಡಿಜೆ ಧರ್ಣಪ್ಪ ಗೌಡರ ತೋಟದಲ್ಲಿ ಸುಮಾರು 25 ಅಡಿಕೆ ಮರಗಳು ಮುರಿದುಬಿದ್ದಿದ್ದು ವಾಸದ ಮನೆ, ಹಟ್ಟಿಯ ಹಂಚು ಹಾರಿಹೋಗಿವೆ. ಗುಂಡಿಜೆ ಶೀನಪ್ಪ ಗೌಡರ ತೋಟದಲ್ಲಿ 25 ಅಡಿಕೆ ಮರ, 50 ಬಾಳೆಗಿಡಗಳು ಮುರಿದುಬಿದ್ದಿವೆ.

ಬಿರ್ಮಿಜಾಲು ನಿವಾಸಿ ಉಮಣ ಗೌಡರವರ ತೋಟದಲ್ಲೂ ಅಡಿಕೆ,ಬಾಳೆಗಿಡಗಳು ಮುರಿದುಬಿದ್ದಿವೆ. ಇದಲ್ಲದೇ ಈ ಪರಿಸರದ ಹಲವು ಮಂದಿಯ ತೋಟದಲ್ಲಿ ಅಡಿಕೆ ಮರಗಳು, ಬಾಳೆಗಿಡಗಳು ನಾಶಗೊಂಡಿವೆ.

ವಿದ್ಯುತ್‌ನಲ್ಲಿ ಅಡಚಣೆ:

ವಳಕಡಮ ಅಂಗನವಾಡಿ ಕೇಂದ್ರ ಹಾಗೂ ವಳಕಡಮ ನಿವಾಸಿ ಕುಂಞಣ್ಣ ಗೌಡರ ಮನೆ ಪಕ್ಕದ ವಿದ್ಯುತ್ ಕಂಬಗಳು ಗಾಳಿಮಳೆಗೆ ಮುರಿದುಬಿದ್ದಿದೆ.ಇದರಿಂದಾಗಿ ಈ ಪರಿಸರದಲ್ಲಿ ನಿನ್ನೆ ಸಂಜೆಯಿಂದ ವಿದ್ಯುತ್ ಸರಬರಾಜಿನಲ್ಲೂ ಅಡಚಣೆ ಉಂಟಾಗಿದೆ. ಗುಂಡಿಜೆ ಎಂಬಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ತಂತಿ ಜೋತುಬಿದ್ದಿದೆ.

ಕಂದಾಯಾಧಿಕಾರಿಗಳು ಭೇಟಿ:

ಮೇ 12ರಂದು ಬೆಳಗ್ಗೆ ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿದ್ದಾರೆ. ಕಡಬ ನಾಡಕಚೇರಿಯ ಕಂದಾಯ ನಿರೀಕ್ಷಕ ಕೊರಗಪ್ಪಹೆಗ್ಡೆ, ಕೊಲ ಗ್ರಾಮಕರಣಿಕ ಪ್ರತಾಪ್‌ಕುಮಾರ್ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಮಕುಂಜ ತಾ.ಪಂ. ಸದಸ್ಯೆ ಜಯಂತಿ ಆರ್, ಕೊಲ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ, ಸದಸ್ಯರುಗಳಾದ ವಿನೋಧರ ಮಾಳ, ತಿಮ್ಮಪ್ಪ ಗೌಡ ಸಂಕೇಶ, ನಾಗೇಶ, ಎಪಿಎಂಸಿ ಸದಸ್ಯ ಶೀನಪ್ಪಗೌಡ ವಳಕಡಮ, ರೈತ ಸಂಘದ ಮುಖಂಡರಾದ ರೂಪೇಶ್ ರೈ ಅಲಿಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News