×
Ad

ರೈಲು ಪ್ರಯಾಣದ ವೇಳೆ ನಾಪತ್ತೆಯಾಗಿದ್ದ ತ್ರಿಶ್ಶೂರ್‌ನ ಮಹಿಳೆಯ ಶವ ಬಾರ್ಕೂರಿನಲ್ಲಿ ಪತ್ತೆ

Update: 2016-05-12 18:30 IST

ಕಾಸರಗೋಡು, ಮೇ 12: ರೈಲು ಪ್ರಯಾಣದ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ತ್ರಿಶ್ಶೂರ್‌ನ ಮಹಿಳೆಯೋರ್ವರ ಮೃತದೇಹ ಉಡುಪಿ ಸಮೀಪದ ಬಾರ್ಕೂರು ರೈಲ್ವೆ ಹಳಿಯಲ್ಲಿ ಗುರುವಾರ ಪತ್ತೆಯಾಗಿದೆ.

ತ್ರಿಶ್ಶೂರು ಚೆಳಕ್ಕರದ ಅಜಿತಾ (40) ಮೃತಪಟ್ಟವರು. ರೈಲು ಹಳಿಯ ಅಲ್ಪ ದೂರದ ಪೊದೆಯೊಂದರಲ್ಲಿ ಮೃತದೇಹ ಪತ್ತೆಯಾಗಿದೆ.

ಮೃತದೇಹದ ತಲೆಭಾಗದಲ್ಲಿ ಗಂಭೀರ ಸ್ವರೂಪದ ಗಾಯಗಳು ಪತ್ತೆಯಾಗಿದ್ದು, ಶಾಲು ಕುತ್ತಿಗೆಗೆ ಬಿಗಿದ ಸ್ಥಿತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರವಿವಾರ ರಾತ್ರಿ ಮುಂಬೈನಿಂದ ತ್ರಿಶ್ಸೂರಿಗೆ ಮಂಗಳ ಎಕ್ಸ್‌ಪ್ರೆಸ್ ರೈಲಿನಲ್ಲಿ ಪತಿ ಹಾಗೂ ಮಕ್ಕಳೊಂದಿಗೆ ಬರುತ್ತಿದ್ದಾಗ ಮಹಿಳೆ ನಾಪತ್ತೆಯಾಗಿದ್ದರು.

ಕಳೆದ 20 ವರ್ಷಗಳಿಂದ ಥಾಣೆಯ ಬದಲ್‌ಪುರ್ ಈಸ್ಟ್‌ನಲ್ಲಿ ಕುಟುಂಬ ವಾಸಿಸುತ್ತಿದೆ. ರಜೆಯಲ್ಲಿ ಊರಿಗೆ ಹೊರಟಿದ್ದು, ರವಿವಾರ ರಾತ್ರಿ ಮುಂಬೈನ ಕಲ್ಯಾಣ್ ನಿಲ್ದಾಣದಲ್ಲಿ ರೈಲು ಹತ್ತಿದ್ದರು. ರಾತ್ರಿ ಗೋವಾ ಮಡ್ಗಾಂವ್‌ನಲ್ಲಿ ಆಹಾರ ಸೇವಿಸಿ ರೈಲಿನಲ್ಲಿ ಮಲಗಿದ್ದರು.

ಸೋಮವಾರ ಬೆಳಗ್ಗೆ ಪಯ್ಯನ್ನೂರಿಗೆ ತಲುಪಿದಾಗ ಅಜಿತಾ ನಾಪತ್ತೆಯಾಗಿರುವುದು ಪತಿ ಮತ್ತು ಮಕ್ಕಳ ಗಮನಕ್ಕೆ ಬಂದಿದೆ. ಇವರ ಬ್ಯಾಗ್ ಮತ್ತು ಮೊಬೈಲ್ ಸೇರಿದಂತೆ ಎಲ್ಲಾ ವಸ್ತುಗಳು ಸೀಟಿನಲ್ಲೇ ಇದ್ದವು.

ತಲೆಗೆ ಗಂಭೀರವಾದ ಏಟು ತಗಲಿದ್ದು ಸಾವಿಗೆ ಕಾರಣ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದು ಅಜಿತಾರ ಸಂಬಂಧಿಕರು ಉಡುಪಿಗೆ ಪ್ರಯಾಣ ಬೆಳೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News