ನಿಡ್ಲೆ: ಭಾರೀ ಮಳೆಗೆ ಕೋಳಿಫಾರಂಗೆ ಹಾನಿ; ನೂರಾರು ಕೋಳಿಗಳ ಸಾವು
Update: 2016-05-12 18:42 IST
ಬೆಳ್ತಂಗಡಿ, ಮೇ 12: ಬುಧವಾರ ರಾತ್ರಿ ಸುರಿದ ಭಾರೀ ಮಳೆ, ಗಾಳಿಗೆ ನಿಡ್ಲೆ ಗ್ರಾಮದ ನೂಜಿಲ ಎಂಬಲ್ಲಿ ಕೋಳಿ ಫಾರಂ ಒಂದು ಸಂಪೂರ್ಣ ನಾಶಗೊಂಡಿದ್ದು, ನೂರಾರು ಕೋಳಿಗಳು ಸಾವನ್ನಪ್ಪಿವೆ.
ಸ್ಥಳೀಯ ನಿವಾಸಿ ಲಕ್ಷ್ಮಣ ಗೌಡ ಎಂಬವರಿಗೆ ಸೇರಿದ ಕೋಳಿ ಫಾರಂ ಇದಾಗಿದ್ದು ಕಟ್ಟಡದ ಮಾಡು ಗಾಳಿಗೆ ಹಾರಿ ಹೋಗಿದೆ. ಹಂಚುಗಳು ಪುಡಿಪುಡಿಯಾಗಿದೆ. ಕಟ್ಟಡದ ಮಾಡು ಕೆಳಕ್ಕೆ ಉದುರಿದ್ದು ಅದರಡಿಗೆ ಸಿಲುಕಿ ನೂರಾರು ಕೋಳಿಗಳು ಸಾವನ್ನಪ್ಪಿವೆ.
ಎರಡೂವರೆ ಸಾವಿರ ಕೋಳಿಗಳನ್ನು ಸಾಕುವ ಕಟ್ಟಡ ಇದಾಗಿದ್ದು ಸುಮಾರು ಮೂರು ಲಕ್ಷದಷ್ಟು ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಸ್ಥಳಕ್ಕೆ ಗ್ರಾಮ ಕರಣಿಕರು ಹಾಗೂ ಗ್ರಾಪಂನ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.