ಮೇ 13ರಿಂದ ಆಯಾ ವಾರ್ಡ್‌ಗಳ ನೀರಿನ ಮೂಲ ಬಳಕೆಗೆ ಜಿಲ್ಲಾಧಿಕಾರಿ ಸೂಚನೆ

Update: 2016-05-12 13:45 GMT

ಮಂಗಳೂರು,ಮೇ 12: ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ಒಂದು ದಿನಕ್ಕೆ ಪೂರೈಕೆ ಮಾಡುವಷ್ಟು ಮಾತ್ರವೇ ನೀರು ಲಭ್ಯ ಇರುವುದರಿಂದರಿಂದ ಮೇ 13ರಿಂದ ಆಯಾ ವಾರ್ಡ್‌ಗಳಲ್ಲಿರುವ ನೀರಿನ ಮೂಲಗಳನ್ನೇ ಬಳಕೆ ಮಾಡುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸೂಚಿಸಿದ್ದಾರೆ.

ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ವಿವಿಧ ಸಂಘ ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಖಾಸಗಿ ನೀರು ಪೂರೈಕೆದಾರರ ಸಭೆಯಲ್ಲಿ ಜಿಲ್ಲಾಧಿಕಾರಿ ಮನಪಾ ಅಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡಿದರು.

ಆಯಾ ವಾರ್ಡ್‌ಗಳಲ್ಲಿ ಲಭ್ಯ ಇರುವ ಹಾಗೂ ಕುಡಿಯಲು ಯೋಗ್ಯವಾದ ಬೋರ್‌ವೆಲ್‌ಗಳು ಹಾಗೂ ತೆರೆದ ಬಾವಿಗಳ ಮಾಹಿತಿಯನ್ನು ತಕ್ಷಣ ಒದಗಿಸುವಂತೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿ ಆಯಾ ವಾರ್ಡ್‌ಗಳಲ್ಲಿನ ಜಲಮೂಲಗಳಿಂದ ನೀರು ಪೂರೈಕೆ ಸಾಧ್ಯವಾಗದಿರುವ ಸಂದರ್ಭ ಖಾಸಗಿ ಕೊಳೆಬಾವಿ ಅಥವಾ ಟ್ಯಾಂಕರ್‌ಗಳನ್ನು ಉಪಯೋಗಿಸುವಂತೆ ಸಲಹೆ ನೀಡಿದರು.

ತುಂಬೆ ಡ್ಯಾಂನ ನೀರನ್ನು ಪೈಪ್‌ಮೂಲಕವೇ ಪೂರೈಸಬೇಕು. ಮನಪಾ ವ್ಯಾಪ್ತಿಯಲ್ಲಿನ ನೀರಿನ ಸಮಸ್ಯೆ ಹಾಗೂ ಪರಿಹಾರದ ಕುರಿತಂತೆ ಪ್ರತಿದಿನ ರಾತ್ರಿ 8 ಗಂಟೆಗೆ ಅಧಿಕಾರಿಗಳೊಂದಿಗೆ ವಿಮರ್ಶೆ ನಡೆಸುವಂತೆ ಆಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ವಾರ್ಡ್‌ನಲ್ಲಿ ನೀರು ಪೂರೈಸುವ ಉಸ್ತುವಾರಿಗೆ ಇಂಜಿನಿಯರ್, ಅಧಿಕಾರಿಯನ್ನು ನಿಯೋಜಿಸಲಾಗುವುದು. ಅಲ್ಲದೆ ಪಾಲಿಕೆಯ ಸದಸ್ಯರು ಮಾರ್ಗದರ್ಶನ ಮಾಡಲಿದ್ದಾರೆ. ನೀರು ಪೂರೈಕೆಯಾಗದಿದ್ದರೆ ಜನತೆ ಪಾಲಿಕೆಯ ಕಂಟ್ರೋಲ್ ರೂಂಗೆ ಅಥವಾ ಆಯಾ ಸದಸ್ಯರಿಗೆ ಕರೆ ಮಾಡುವಂತೆಯೂ ತಿಳಿಸಿದರು.

ನೂತನ ತುಂಬೆ ಡ್ಯಾಂ ಮೇ ಅಂತ್ಯಕ್ಕೆ ಪೂರ್ಣ: ಭೂಸ್ವಾಧೀನ ಪ್ರಕ್ರಿಯೆಗೆ ಸೂಚನೆ

ತುಂಬೆಯಲ್ಲಿ ಹೊಸ ಡ್ಯಾಂನ ಕಾಮಗಾರಿ ಮೇ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ನೂತನ ಡ್ಯಾಂನಲ್ಲಿ 7 ಮೀಟರ್ ನೀರು ಸಂಗ್ರಹಿಸಬಹುದಾಗಿದ್ದರೂ ಪ್ರಸ್ತುತ ಹಳೆ ಡ್ಯಾಂನ ವ್ಯವಸ್ಥೆಯಂತೆ 4 ಮೀಟರ್ ಮಾತ್ರ ನೀರು ಸಂಗ್ರಹಿಸಬಹುದಾಗಿದೆ. ಆದ್ದರಿಂದ ಅಗತ್ಯವಿರುವ ಭೂಮಿಯ ಸ್ವಾಧೀನಕ್ಕೆ ಅಗತ್ಯ ಪ್ರಕ್ರಿಯೆಯನ್ನು ಆರಂಭಿಸುವಂತೆ ಅವರು ಸೂಚಿಸಿದರು. ತುಂಬೆ ಡ್ಯಾಂನಲ್ಲಿ ಗುರುವಾರ ನೀರಿನ ಮಟ್ಟ 4 ಅಡಿಗೆ ಇಳಿಕೆಯಾಗಿದೆ. ಬುಧವಾರ ರಾತ್ರಿ ಜಿಲ್ಲೆಯ ಹಲವು ಕಡೆ ಮಳೆ ಸುರಿದಿದೆ. ಆದರೆ ಡ್ಯಾಂಗೆ ನೀರು ಹರಿದು ಬರುವಷ್ಟು ಪ್ರಮಾಣದಲ್ಲಿ ಮಳೆ ಬಂದಿಲ್ಲ. ಇಂದು ನಾಳೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಮಳೆಯಾಗದಿದ್ದರೂ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಗೆ ಪರ್ಯಾಯ ಮೂಲಗಳನ್ನು ಈಗಾಗಲೇ ಶೋಧಿಸಲಾಗಿದೆ. ಮೇ ಅಂತ್ಯದವರೆಗೆ ಮಂಗಳೂರಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಶಾಸಕ ಮೊಯ್ದಿನ್ ಬಾವಾ, ಮೇಯರ್ ಹರಿನಾಥ್, ಉಪ ಮೇಯರ್ ಸುಮಿತ್ರಾ ಉಪಸ್ಥಿತರಿದ್ದರು. 

ಮೂಲ್ಕಿಗೆ ಶಾಂಭವಿ ನದಿ ನೀರು

ಪ್ರಸ್ತುತ ಮೂಲ್ಕಿಗೆ ತುಂಬೆ ಡ್ಯಾಂನಿಂದ ನೀರು ಪೂರೈಸಲಾಗುತ್ತಿದೆ. ಆದರೆ ಡ್ಯಾಂನಲ್ಲಿ ನೀರು ಸಂಗ್ರಹ ಇಳಿಮುಖವಾದ ಸಲುವಾಗಿ ಶಾಂಭವಿ ನದಿಯಿಂದ ನೀರು ಪೂರೈಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಇಬ್ರಾಹೀಂ ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ನೀಡುವಾಗ ನೀರಿಂಗಿಸುವಿಕೆ ಹಾಗೂ ಅಂತರ್ಜಲ ವೃದ್ಧಿಸುವುದನ್ನು ಕಡ್ಡಾಯಗೊಳಿಸುವಂತೆ ಸಭೆಯಲ್ಲಿ ಜಿಲ್ಲಾಧಿಕಾರಿ ಮನಪಾ ಆಯುಕ್ತರಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಸಾರ್ವಜನಿಕ ಪ್ರತಿನಿಧಿಗಳು ನಗರದಲ್ಲಿ ನೀರಿನ ಸಮಸ್ಯೆಗೆ ಜಲಮೂಲಗಳ ನಿರ್ವಹಣೆಯಲ್ಲಿನ ನಿರ್ಲಕ್ಷವೇ ಪ್ರಮುಖ ಕಾರಣ ಎಂದು ಆಪಾದಿಸಿದರು. ಮಾತ್ರವಲ್ಲದೆ, ನಗರದಲ್ಲಿರುವ ಕೆರೆಗಳನ್ನು ಅಭಿವೃದ್ದಿಪಡಿಸುವ ಜತೆಗೆ ಜಲಮೂಲಗಳನ್ನು ಸಂರಕ್ಷಿಸುವ ಕಾರ್ಯಕ್ಕೆ ನಗರಾಡಳಿತ ಹೆಚ್ಚಿನ ಒತ್ತು ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News