ರಂತಡ್ಕ: ಕಾಲ್ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ
ಕೊಣಾಜೆ, ಮೇ 12: ಬೋಳಿಯಾರ್ ಗ್ರಾಮದ ರಂತಡ್ಕ-ಅಮ್ಮೆಂಬಳದಲ್ಲಿ ಉದ್ಯೋಗ ಖಾತರಿ ಯೋಜನೆಯ ಏಳು ಲಕ್ಷ ರೂ. ಅನುದಾನದಲ್ಲಿ ಕಾಲ್ಸೇತುವೆ ನಿರ್ಮಾಣ ಕಾಮಗಾರಿಗೆ ಬೋಳಿಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಆಚಾರ್ಯ ಗುರುವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸೇತುವೆ ಮುರಿದು ಬಿದ್ದು ಮೂರು ವರ್ಷಗಳಾಗಿವೆ. ಇದರಿಂದ ಉಭಯ ಊರಿನ ಜನರು ತೊಂದರೆಗೀಡಾಗಿದ್ದು, ಶಾಶ್ವತ ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಸಿಕ್ಕರೆ, ರಸ್ತೆ ನಿರ್ಮಾಣಕ್ಕಿರುವ ಜಮೀನು ಸಮಸ್ಯೆ ತಾವು ಸರಿಪಡಿಸುವುದಾಗಿ ಹೇಳಿದರು.
ಗ್ರಾಮದ ಕೆಲವು ರಸ್ತೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಅವುಗಳ ಅಭಿವೃದ್ಧಿ, ಎರಡು ಊರು ಸಂಪರ್ಕ ಕಲ್ಪಿಸುವ ಶಾಶ್ವತ ಸೇತುವೆ ಜೊತೆ ರಸ್ತೆ ನಿರ್ಮಾಣಕ್ಕೆ ಸರಕಾರಿ ಮಟ್ಟದಿಂದ ಪ್ರಯತ್ನ ಆಗಬೇಕಿದ್ದು, ಸಚಿವರು ಹಾಗೂ ತಾ.ಪಂ. ಸದಸ್ಯರ ಬಳಿ ಮನವಿ ಮಾಡಲಾಗಿದೆ. ಗ್ರಾ.ಪಂ. ಅಧಿಕಾರಕ್ಕೆ ಬಂದ ಸಂದರ್ಭ ಸ್ಥಳೀಯರ ಬೇಡಿಕೆಯಂತೆ ಸೇತುವೆಗೆ ಕಂಗಿನ ಮರಗಳನ್ನಿಟ್ಟು ಜೋಡಿಸಲಾಗಿತ್ತು. ಈ ವರ್ಷದ ಮಳೆಗಾಲದಲ್ಲಿ ನಡೆದಾಡುವುದು ಅಪಾಯಕಾರಿ ಎನಿಸಿದ್ದರಿಂದ ಪಂಚಾಯತ್‌ನಲ್ಲಿ ಅನುದಾನ ಇಲ್ಲದಿದ್ದರೂ ಉದ್ಯೋಗ ಖಾತರಿ ಯೋಜನೆಯಡಿ ಏಳು ಅಡಿ ಉದ್ದ ಹಾಗೂ ಮೂರು ಅಡಿ ಅಗಲದ ಕಾಲ್ಸೇತುವೆ ನಿರ್ಮಾಣಕ್ಕೆ ಮುಂದಡಿಯಿಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಗ್ರಾಮ ಪಂಚಾಯತ್ ಸ್ಥಳೀಯ ಸದಸ್ಯ ಸಿ.ರಿಯಾಝ್, ಸ್ಥಳೀಯರಾದ ಆಸಿಫ್, ಸತ್ತಾರ್, ಸಂಶೀರ್, ನಿಸಾರ್ ಮೊದಲಾದವರು ಉಪಸ್ಥಿತರಿದ್ದರು.