ಸುಳ್ಯ: ನೀರಿನ ಕೊರತೆಯಿಂದ ಕಂಗೆಟ್ಟ ರೈತರಿಂದ ಸಾಮೂಹಿಕ ನೀರಾವರಿ ವ್ಯವಸ್ಥೆ
ಸುಳ್ಯ, ಮೇ 12: ಮುಂಗಾರು ಪೂರ್ವ ಮಳೆ ಕೈಕೊಟ್ಟದ್ದರಿಂದ ಎಲ್ಲೆಡೆ ಬರ. ಹಲವೆಡೆ ಕುಡಿಯುವ ನೀರಿಗೂ ತತ್ವಾರ. ತಾವು ನೆಟ್ಟು ಬೆಳೆಸಿದ ತೋಟ ಕಣ್ಣೆದುರೇ ಒಣಗಿ ಹೋಗುವುದನ್ನು ನೋಡುವುದನ್ನು ಬಿಟ್ಟು ರೈತರಿಗೆ ಬೇರೆ ದಾರಿಯೇ ಇಲ್ಲವಾಗಿದೆ. ಮಳೆಗಾಗಿ ಎಲ್ಲೆಡೆ ದೇವರಿಗೆ ಮೊರೆ ಇಡುವ ಈ ದಿನಗಳಲ್ಲಿ ರೈತರು ಸಾಮೂಹಿಕ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ಬರವನ್ನು ತಕ್ಕ ಮಟ್ಟಿಗೆ ಎದುರಿಸಲು ಸನ್ನದ್ಧರಾಗಿದ್ದಾರೆ.
ಮರ್ಕಂಜ ಗ್ರಾಮದ ತೇರ್ಥಮಜಲು ಸಮೀಪ ದೋಳ, ಕಾಯರ, ಕುಲ್ಮಡ್ಕ ಪ್ರದೇಶಗಳ ರೈತರು ಒಟ್ಟಾಗಿ ಕಿಂಡಿ ಅಣೆಕಟ್ಟಿನಿಂದ ಸಾಮೂಹಿಕ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ನೀರಾವರಿ ಇಲಾಖೆಯ ವತಿಯಿಂದ ಕಾಯರ ಎಂಬಲ್ಲಿ ಕೆಲವು ವರ್ಷಗಳ ಹಿಂದೆ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದ್ದು, ನದಿ ಪಾತ್ರದ ಜನರು ಮಾತ್ರ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದರು. ಅಣೆಕಟ್ಟಿನಲ್ಲಿ ಸಾಕಷ್ಟು ನೀರಿದ್ದರೂ ದೂರದ ರೈತರು ನೀರಿಗಾಗಿ ಪರಿತಪಿಸುತ್ತಿದ್ದರು.
ಊರಿನ ಹಿರಿಯರಾದ ಶಂಕರನಾರಾಯಣ ಶಾಸ್ತ್ರಿ ದೋಳ ಮುಂದಾಳತ್ವದಲ್ಲಿ 15 ಸಣ್ಣ ರೈತರು ಒಟ್ಟಾಗಿ ಸಾಮೂಹಿಕ ನೆಲೆಯಲ್ಲಿ 8 ಎಚ್.ಪಿ. ಡೀಸೆಲ್ ಪಂಪು ಖರೀದಿಸಿ ಎರಡೂವರೆ ಇಂಚಿನ ಪಿವಿಸಿ ಪೈಪ್ ಖರೀದಿಸಿ ತಮ್ಮ ತೋಟಕ್ಕೆ ಅಳವಡಿಸಿದ್ದಾರೆ. ಪಂಪಿಗೆ ಶೆಡ್ ವ್ಯವಸ್ಥೆಯನ್ನೂ ಮಾಡಿದ್ದಾರೆ. ಒಂದೇ ದಿನದಲ್ಲಿ 1.5 ಲಕ್ಷ ರೂ. ವೆಚ್ಚ ಮಾಡಿ ಸುಮಾರು 720 ಮೀಟರ್ ಉದ್ದದ ಪೈಪ್‌ಲೈನ್ ಅಳವಡಿಸಿ ತೋಟಕ್ಕೆ ಪರ್ಯಾಯ ನೀರಾವರಿಯನ್ನು ಮಾಡಿಕೊಂಡಿದ್ದಾರೆ.
ಒಣಗುತ್ತಿರುವ ತೋಟವನ್ನು ತಾತ್ಕಾಲಿಕವಾಗಿ ಉಳಿಸಿದ ಸಮಾಧಾನ ಅವರಲ್ಲಿದೆ. ಎಲ್ಲರೂ ಸಣ್ಣ ರೈತರೇ. ಅದರಲ್ಲೂ ಹಲವು ತೋಟಗಳು ಹಳದಿ ಎಲೆ ರೋಗಕ್ಕೆ ತುತ್ತಾಗಿದೆ. ಹೀಗಿದ್ದರೂ ಸಾಮೂಹಿಕ ಕಾರ್ಯದಲ್ಲಿ ಯಶಸ್ಸನ್ನು ಕಂಡಿದ್ದಾರೆ. ಗಂಟೆಗಳ ಲೆಕ್ಕದಲ್ಲಿ ನೀರಾವರಿ, ಅವರ ತೋಟದಲ್ಲಿ ಹಾದು ಹೋಗುವ ಪೈಪಿನ ಖರ್ಚನ್ನು ಅವರವರೇ ಭರಿಸಬೇಕು ಇದು ನಿಯಮ.
ಅಣೆಕಟ್ಟಿಗೆ ಹಲಗೆ ಅಳವಡಿಸುವಾಗ ಮಧ್ಯದಲ್ಲಿ ಮಣ್ಣನ್ನು ಹಾಕಿದ್ದು, ಸ್ವಲ್ಪ ಪ್ರಮಾಣದ ನೀರು ಕೆಳಗೆ ಹರಿದು ಹೋಗುತ್ತಿದೆ. ಮುಂದಿನ ವರ್ಷ ಹಲಗೆಗಳ ಮಧ್ಯೆ ಪ್ಲಾಸ್ಟಿಕ್ ಶೀಟ್ ಅಳವಡಿಸಿ ಮಣ್ಣು ಹಾಕುವ ವ್ಯವಸ್ಥೆ ಮಾಡುವುದಾಗಿ ಶಂಕರನಾರಾಯಣ ಶಾಸ್ತ್ರಿ ತಿಳಿಸಿದ್ದಾರೆ. ಮೋನಪ್ಪ ಗೌಡ, ಗಂಗಾಧರ ಗೌಡ, ಬೆಳ್ಯಪ್ಪ ಗೌಡ, ಉತ್ತಯ್ಯ ಗೌಡ, ಶಂಕರನಾರಾಯಣ ಶಾಸ್ತ್ರಿ, ಪದ್ಮಯ್ಯ ಗೌಡ, ಸೋಮಶೇಖರ ಗೌಡ, ಜಗನ್ನಾಥ ಗೌಡ, ಸೋಮಯ್ಯ ಗೌಡ, ಶೇಷಮ್ಮ ಈ ಯೋಜನೆಯ ಫಲಾನುವಿಗಳು. ಕೆಲವರು ತಮ್ಮ ಹಳೆಯ ಪೈಪ್‌ಪೈನ್‌ಗೆ ಹೊಸ ಪೈಪ್‌ನ್ನು ಜೋಡಿಸಿದ್ದಾರೆ.
ಇನ್ನು ಕೆಲವರು ತಮ್ಮ ಕೆರೆಗೆ ನೀರನ್ನು ತುಂಬಿಸಿ ಬಳಿಕ ಅಲ್ಲಿಂದ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.