ಉಳ್ಳಾಲ ದರ್ಗಾ ಅಧ್ಯಕ್ಷರ ಆಯ್ಕೆ ವಿವಾದ: ವಕ್ಫ್ ಅಧಿಕಾರಿಗಳ ನೇತೃತ್ವದಲ್ಲಿ ಸಭೆ
Update: 2016-05-12 23:02 IST
ಮಂಗಳೂರು, ಮೇ 12: ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಇಂದು ಮಹತ್ವದ ಸಭೆ ನಡೆಯಿತು.
ಸಮಿತಿಗೆ ಇಬ್ಬರು ಅಧ್ಯಕ್ಷರ ನೇಮಕದಿಂದಾಗಿ ಉಂಟಾಗಿರುವ ಗೊಂದಲವನ್ನು ಶಮನ ಮಾಡುವ ನಿಟ್ಟಿನಲ್ಲಿ ಇತ್ತಂಡಗಳ ತಲಾ ಐವರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಎರಡೂ ಕಡೆಯರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದ್ದು, ಶುಕ್ರವಾರ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸಭೆಯಲ್ಲಿ ಉಳ್ಳಾಲ ಖಾಝಿ ಕೂರತ್ ತಂಙಳ್, ಸಚಿವ ಯು.ಟಿ.ಖಾದರ್, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ರಾಜ್ಯ ವಕ್ಫ್ ಬೋರ್ಡ್ ಸದಸ್ಯರಾದ ವೈ.ಮುಹಮ್ಮದ್ ಕುಂಞಿ, ಶಾಫಿ ಸಅದಿ, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್ ಮೊದಲಾದವರು ಉಪಸ್ಥಿತರಿದ್ದರು.