ಮೇ 27-29: ಸಸಿಹಿತ್ಲು ಬೀಚ್‌ನಲ್ಲಿ ಸರ್ಫಿಂಗ್ ಸ್ಪರ್ಧೆ

Update: 2016-05-13 09:27 GMT

ಮಂಗಳೂರು, ಮೇ 13: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮೇ 27ರಿಂದ 29ರವರೆಗೆ ಮಂಗಳೂರಿನ ಸಸಿಹಿತ್ಲು ಬೀಚ್‌ನಲ್ಲಿ ‘ಆಲ್ ಕಾರ್ಗೊ ಇಂಡಿಯನ್ ಓಪನ್ ಆಫ್ ಸರ್ಫಿಂಗ್’ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ. 

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ದೇಶ ವಿದೇಶಗಳ ಸರ್ಫರ್ ಸಾಹಸಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಸರ್ಫಿಂಗ್ ಉತ್ಸವದ ವಾತಾವರಣವನ್ನು ಒದಗಿಸಲಿದ್ದಾರೆ ಎಂದರು. ಮೂರು ದಿನಗಳ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯು ದೇಶಾದ್ಯಂತದ ಖ್ಯಾತ ಸರ್ಫರ್‌ಗಳನ್ನು ಮಂಗಳೂರಿನತ್ತ ಸೆಳೆಯಲಿದೆ. ಈ ಕಾರ್ಯಕ್ರಮದ ಮೂಲಕ ಕರ್ನಾಟಕದ ಬೀಚ್‌ಗಳಲ್ಲಿ ಸರ್ಫಿಂಗ್ ಮತ್ತು ಸಾಹಸಮಯ ಜಲ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆ ಇದಾಗಿದ್ದು, 16 ವರ್ಷದೊಳಗಿನ, ಜೂನಿಯರ್ ಯುವಕರು- 17ರಿಂದ 22, ಹಿರಿಯ ಪುರುಷರು 22ರಿಂದ 28, ಮಾಸ್ಟರ್ಸ್ ಪುರುಷರು 28 ಮತುತ ಮೇಲ್ಪಟ್ಟವರು ಹಾಗೂ ಮಹಿಳಾ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಅಂತಾರಾಷ್ಟ್ರೀಯ ಸರ್ಫರ್‌ಗಳಿಗಾಗಿ ಮುಕ್ತ ಪುರುಷರ ವಿಭಾಗದಲ್ಲಿಯೂ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾ, ಫ್ರಾನ್ಸ್ ಹಾಗೂ ಇಂಡೋನೇಶ್ಯದ ಸರ್ಫಿಂಗ್ ಕ್ಷೇತ್ರದ ಅಂತಾರಾಷ್ಟ್ರೀಯ ಚಾಂಪಿಯನ್‌ಗಳು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ವಿವಿಧ ವಿಭಾಗಗಳಿಗೆ ಒಟ್ಟು 6 ಲಕ್ಷ ರೂ. ವೌಲ್ಯದ ನಗದು ಬಹುಮಾನವನ್ನು ವಿತರಿಸಲಾಗುವುದು ಎಂದು ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಕಿಶೋರ್ ಕುಮಾರ್ ಮಾಹಿತಿ ನೀಡಿದರು.

ಈಗಾಗಲೇ 50 ಸರ್ಫರ್‌ಗಳು ಹೆಸರು ನೋಂದಾಯಿಸಿಕೊಂಡಿದ್ದು, ಮೇ 24ರವರೆಗೆ 100ಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಸರ್ಫಿಂಗ್ ಸ್ಪರ್ಧೆ ನಡೆಯುತ್ತಿದೆ. ಕರಾವಳಿಯ ಸಮುದ್ರದಲ್ಲಿ ಐದರಿಂದ ಎಂಟು ಅಡಿಗಳವರೆಗೆ ಪುಟಿದೇಳುವ ಸಮುದ್ರದ ಅಲೆಗಳನ್ನು ಎದುರಿಸುತ್ತಾ ಸಾಗುವುದೇ ಸರ್ಫರ್‌ಗಳಿಗೆ ಸವಾಲಿನ ವಿಷಯವಾಗಿದೆ. ದೇಶದ ಕಿರಿಯ ಹಾಗೂ ಖ್ಯಾತ ಸರ್ಫರ್‌ಗಳಾಗಿ ಗುರುತಿಸಿಕೊಂಡಿರುವ ಮಂಗಳೂರಿನ ಅನೀಶಾ ನಾಯಕ್ ಹಾಗೂ ಸಿಂಚನಾ ಗೌಡ ಮಹಿಳಾ ವಿಭಾಗದಲ್ಲಿ ತಮ್ಮ ಸಾಹಸವನ್ನು ಪ್ರದರ್ಶಿಸಲಿದ್ದಾರೆ. ಇದರ ಜತೆಯಲ್ಲೇ ಪುರುಷರ ವಿಭಾಗದಲ್ಲಿ ಮುಲ್ಕಿಯ ದೀಕ್ಷಿತ್ ಸುವರ್ಣ ಹಾಗೂ ಕಿರಣ್ ಕುಮಾರ್ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ ಎಂದು ಅವರು ಹೇಳಿದರು. ಅಂತಾರಾಷ್ಟ್ರೀಯ ಸರ್ಫಿಂಗ್ ಅಸೋಸಿಯೇಶನ್ ಮತ್ತು ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಈ ಸ್ಪರ್ಧೆಯನ್ನು ಕೆನರಾ ಸರ್ಫಿಂಗ್ ಆ್ಯಂಡ್ ವಾಟರ್ ಸ್ಪೋರ್ಟ್ಸ್ ಪ್ರಮೋಶನ್ ಕೌನ್ಸಿಲ್‌ನ ಸಹಭಾಗಿತ್ವದಲ್ಲಿ ಮಂತ್ರ ಸರ್ಫ್ ಕ್ಲಬ್ ಆಯೋಜಿಸುತ್ತಿದೆ ಎಂದು ಅವರು ಹೇಳಿದರು.

15ರಂದು ಬೀಚ್ ಸ್ವಚ್ಛತೆ

ರೋಟರಿ ಕ್ಲಬ್ ವತಿಯಿಂದ ಸರ್ಫಿಂಗ್ ಸ್ಪರ್ಧೆಯ ಪೂರ್ವಭಾವಿಯಾಗಿ ಮೇ 15ರಂದು ಸಸಿಹಿತ್ಲು ಬೀಚ್‌ನಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿಯ ಯತೀಶ್ ಬೈಕಂಪಾಡಿ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಸರ್ಫರ್ ರಾಮ್ ಮೋಹನ್ ಪರಂಪಜೆ, ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಕೆಸಿಸಿಐ ಅಧ್ಯಕ, ರಾಮ್‌ಮೋಹನ್ ಪೈ ಮಾರೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News