ಮುಂಡಗೋಡ: ಸಿಡಿಲಿನ ಆಘಾತಕ್ಕೆ ಮೂವರು ಮಕ್ಕಳಿಗೆ ಗಾಯ
ಮುಂಡಗೋಡ, ಮೇ 13: ಗುಡುಗು-ಸಿಡಿಲು ಸಹಿತ ಸುರಿದ ಗಾಳಿಗೆ ಮುಂಡಗೋಡ ತಾಲೂಕಿನಲ್ಲಿ ಅಪಾರ ಆಸ್ತಿಪಾಸ್ತಿ ಹಾನಿ ಸಂಭವಿಸಿದ್ದಲ್ಲದೇ, ಸಿಡಿಲಿನ ಆಘಾತಕ್ಕೊಳಗಾಗಿ ಮೂವರು ಮಕ್ಕಳು ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಪಟ್ಟಣದ ಗಾಂಧಿನಗರ ಬಡಾವಣೆಯಲ್ಲಿ ತೆಂಗಿನಮರವೊಂದಕ್ಕೆ ನಿನ್ನೆ ಸಿಡಿಲು ಬಡಿದಿದೆ. ಈ ವೇಳೆ ಅದೇ ಪರಿಸರದಲ್ಲಿ ಆಟವಾಡುತ್ತಿದ್ದ ಪ್ರವೀಣ ಕೊರವರ, ಸುಪ್ರಿಯಾ ಕೊರವರ, ಗಣೇಶ ಕೊರವರ ಎಂಬ ಮೂವರು ಮಕ್ಕಳು ಸಿಡಿಲಿನ ಪ್ರಭೆಗೆ ಸಿಲುಕಿ ಅಸ್ವಸ್ಥರಾದರು. ಅವರನ್ನು ಕೂಡಲೇ ಸ್ಥಲೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಳಿ ಆರ್ಭಟ: ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಕರಗಿನಕೊಪ್ಪಗ್ರಾಮದ ಹುಬ್ಬಳ್ಳಿ-ಶಿರಸಿ ರಸ್ತೆಯಲ್ಲಿರುವ ಶೀಲಾ ಕುಂಬಾರ ಎಂಬುವವರ ಮನೆಯ ಮೇಲ್ಛಾವಣಿ ಕಬ್ಬಿಣದ ಶೀಟ್‌ಗಳು ಹಾರಿ ಹೋಗಿವೆ. ಈ ಶೀಟ್‌ಗಲು ಪಕ್ಕದ ಅರುಣಾ ಕಿತ್ತೂರ ಎಂಬವರ ಮನೆಯ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಇದರಿಂದ ಅರುಣಾ ಅವರ ಮನೆಯಲ್ಲಿದ್ದ 2 ಮೊಬೈಲ್ ಫೋನ್, ಟಿ.ವಿ. ಮುಂತಾದ ಎಲೆಕ್ಟ್ರಾನಿಕ್ ಸಾಮಗ್ರಿಗಳು ಹಾನಿಗೊಳಗಾಗಿವೆ. ಘಟನಾ ಸ್ಥಳಕ್ಕೆ ಜಿ.ಪಂ. ಸದಸ್ಯ ರವಿಗೌಡ ಪಾಟೀಲ, ಎಎಸ್ಸೈ ಜಕ್ಕಣ್ಣವರ, ಹೆಸ್ಕಾ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಾಲೂಕಿನ ಹಲವೆಡೆ ಗಾಳಿಮಳೆಯಿಂದ ಅಪಾರ ಹಾನಿಯಾಗಿರುವುದು ವರದಿಯಾಗಿದೆ.