ಮುರ್ಡೇಶ್ವರದಲ್ಲಿ ನೀರು, ತ್ಯಾಜ್ಯ ವಿಲೇವಾರಿ ಸಮಸ್ಯೆ: ಖೌಮಿ ತಂಝೀಮ್‌ನಿಂದ ತಹಶೀಲ್ದಾರರಿಗೆ ಮನವಿ
ಭಟ್ಕಳ, ಮೇ 3: ಮುರ್ಡೇಶ್ವರ ನ್ಯಾಶನಲ್ ಕಾಲನಿಯಲ್ಲಿ ಕುಡಿಯುವ ನೀರು ಮತ್ತು ತ್ಯಾಜ್ಯ ವಿಲೇವಾರಿ ಸಮಸ್ಯೆಯು ವಿಪರೀತವಾಗಿದ್ದು, ಪರಿಹಾರ ಕಲ್ಪಿಸುವಂತೆ ಮುರ್ಡೇಶ್ವರ ಖೌಮಿ ತಂಝೀಮ್ ಸಂಘಟನೆಯ ನಿಯೋಗವು ಭಟ್ಕಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಮಾವಳ್ಳಿ-1ರ ನ್ಯಾಶನಲ್ ಕಾಲನಿ ವ್ಯಾಪ್ತಿಯಲ್ಲಿ ಪ್ರತಿ ವರ್ಷವೂ ಕುಡಿಯುವ ನೀರಿನ ಅಭಾವ ಇರುತ್ತದೆ. ಬೇಸಿಗೆಯಲ್ಲಿ ಇಲ್ಲಿನ ಪ್ರತಿ ಕುಟುಂಬವು ನೀರಿಗಾಗಿ ಕಿಲೋಮೀಟರಂಗಟ್ಟಲೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಸರಕಾರವು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಈಗಾಗಲೇ ಹಲವಾರು ಕ್ರಮಗಳನ್ನು ಘೋಷಣೆ ಮಾಡಿದೆ. ಆದರೆ ಮಾವಳ್ಳಿ-1 ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರು ಕುಡಿಯುವ ನೀರಿಗಾಗಿ 4-5 ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕಳೆದ ಫೆಬ್ರವರಿಯಿಂದಲೇ ಜನರು ನೀರಿನ ಸಮಸ್ಯೆಯನ್ನು ಎದುರಿಸುತ್ತ ಬಂದಿದ್ದು, ಇದೀಗ ಪರಿಸ್ಥಿತಿ ಬಿಗಡಾಯಿಸಿದೆ ಎಂದು ನಿಯೋಗ ಮನವಿಯಲ್ಲಿ ಅಳಲು ತೋಡಿಕೊಂಡಿದೆ.
ಅಲ್ಲದೇ, ಕಳೆದ 1 ವರ್ಷದಿಂದ ಈ ಭಾಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿಯೇ ಬಿದ್ದಿದೆ. ಮಿತಿಮೀರಿದ ತ್ಯಾಜ್ಯ ರಾಶಿ ಬಿದ್ದಿದ್ದು, ಇದು ಸೊಳ್ಳೆ ಉತ್ಪತ್ತಿಗೆ ಕಾರಣವಾಗಿದೆ. ಇದರಿಂದ ಪರಿಸರದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಆದುದರಿಂದ ಈ ಪರಿಸರಕ್ಕೆ ಹಿರಿಯ ಅಧಿಕಾರಿಗಳು ಕೂಡಲೇ ಆಗಮಿಸಿ ಇಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ. ನಿಯೋಗದಲ್ಲಿ ತಂಝೀಮ್‌ನ ಪ್ರಧಾನ ಕಾರ್ಯದರ್ಶಿ ವಾಸೀಮ್ ಮನ್ನಾ, ಖಾಸೀರ್ ಅಹ್ಮದ್, ಅಬ್ದುಲ್ ಫೈಝ್ ಮುಂತಾದವರು ಉಪಸ್ಥಿತರಿದ್ದರು.