×
Ad

ತನ್ನ ಗೌರವಧನವನ್ನು ಗ್ರಾಮದ ಬಡವರಿಗೆ ಹಂಚಲು ಸೂಚಿಸಿದ ಗ್ರಾ.ಪಂ. ಅಧ್ಯಕ್ಷ

Update: 2016-05-13 17:09 IST

ಉಪ್ಪಿನಂಗಡಿ, ಮೇ 13: ಸರಕಾರದಿಂದ ತನಗೆ ಬರುವ ಗೌರವಧನವನ್ನು ಗ್ರಾಮ ವ್ಯಾಪ್ತಿಯ ಬಡವರಿಗೆ ಹಂಚುವಂತೆ ತಣ್ಣೀರುಪಂಥ ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದ್ದಾರೆ.

 ತಣ್ಣೀರುಪಂಥ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ತಣ್ಣೀರುಪಂಥ ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಯವಿಕ್ರಮ್, ಈ ಬಾರಿ ಗ್ರಾಮದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಡ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ತನ್ನ ಅಧಿಕಾರಾವಧಿಯಿರುವವರೆಗೆ ತನಗೆ ಸರಕಾರದಿಂದ ಬರುವ ಗೌರವಧನವನ್ನು ಗ್ರಾಮದ ಬಡವರನ್ನು ಗುರುತಿಸಿ ವಿತರಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.

ಆಯುರ್ವೇದ ಔಷಧಿವನ ನಿರ್ಮಿಸಲು ಅಳಿಕೆಯಲ್ಲಿ ಕಾಯ್ದಿರಿಸಲಾದ 13 ಎಕ್ರೆ ಜಾಗದಲ್ಲಿ 25 ಸೆಂಟ್ಸ್ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಿಸಲು ಕಾಯ್ದಿರಿಸಲು ಸಭೆಯಲ್ಲಿ ಮಂಜೂರಾತಿ ನೀಡಲಾಯಿತು.

ಬಸವ ಜಯಂತಿ ಯೋಜನೆಯಡಿ ಗ್ರಾಮ ಸಭೆಯಲ್ಲಿ ಮಂಜೂರುಗೊಂಡ 10 ಫಲಾನುವಿಗಳ ಹೆಸರನ್ನು ಸಭೆಯ ಮುಂದಿಟ್ಟು ಸದಸ್ಯರ ಅನುಮೋದನೆ ಪಡೆಯಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸಲು ಸರಕಾರದ ಆದೇಶದಂತೆ ಖಾಸಗಿ ನೀರಿನ ಮೂಲಗಳನ್ನು ವಶಕ್ಕೆ ಪಡೆಯಲು ಖಾಸಗಿ ನೀರಿನ ಮೂಲಗಳ ವಾರೀಸುದಾರರ ಅನುಮತಿ ಕೇಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ರಸ್ತೆಯ ಚರಂಡಿಗೆ ಖಾಸಗಿ ವ್ಯಕ್ತಿಗಳು ಮಲಿನ ನೀರು ಹರಿಸಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

ಕರಾಯ ಜನತಾ ಕಾಲನಿಯ ಸುಮಾರು 30 ಮನೆಗಳಿಗೆ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೊಳವೆ ಬಾವಿಯಿಂದ ನೀರು ಪಡೆಯಲು ತೀರ್ಮಾನಿಸಲಾಯಿತು.

ಸಬೆಯಲ್ಲಿ ಉಪಾಧ್ಯಕ್ಷ ಕೇಶವ ನಾಯ್ಕ, ಸದಸ್ಯರಾದ ಸದಾನಂದ ಶೆಟ್ಟಿ, ಯು.ಕೆ. ಅಯೂಬ್, ನವೀನ್ ಕುಮಾರ್, ರಹ್ಮಾನ್, ಎ.ಅಬ್ದುಲ್, ರಾಕೇಶ್, ಕೈರುನ್ನಿಸಾ, ಶೇಲೆಟ್ ವಾಸ್, ಸುಮಾ, ಭಾರತಿ, ಯಮುನಾ, ಗೀತಾ ಎ., ಹೇಮಾವತಿ, ಸರೋಜಿನಿ, ಶಕುಂತಳಾ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ವರದಿ ಮಂಡಿಸಿ, ಅರ್ಜಿಗಳನ್ನು ವಿಲೇವಾರಿಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News