×
Ad

ಮಂಗಳೂರು ಉತ್ತರ ಕ್ಷೇತ್ರದಲ್ಲಿ 150 ಕೋಟಿ ರೂ.ಗೂ ಅಧಿಕ ಅಭಿವೃದ್ದಿ ಕಾಮಗಾರಿ: ಮೊಯ್ದಿನ್ ಬಾವ

Update: 2016-05-13 17:29 IST

ಮಂಗಳೂರು, ಮೇ 13: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 3 ವರ್ಷದ ಅವಧಿಯಲ್ಲಿ 150 ಕೋ.ರೂ.ಗಳಿಗೂ ಮಿಕ್ಕಿ ಅಭಿವೃದ್ದಿ ಕಾಮಗಾರಿಗಳು ನಡೆದಿದೆ ಎಂದು ಶಾಸಕ ಬಿ.ಎ. ಮೊಯ್ದೀನ್ ಬಾವ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಪಾಲಿಕೆ ವ್ಯಾಪ್ತಿಯ ಸುರತ್ಕಲ್ ಪ್ರದೇಶಕ್ಕೆ ಪ್ರತ್ಯೇಕ ಆಡಳಿತ ಕಚೇರಿ, ನೂತನ ನವೀಕೃತ ಮಾರುಕಟ್ಟೆ ಸಂಕೀರ್ಣ ನಿರ್ಮಾಣಕ್ಕೆ ಚಾಲನೆ, ಸುರತ್ಕಲ್ ಎಂಆರ್‌ಪಿಎಲ್‌ನ ಪ್ರದೇಶಕ್ಕೆ ಆರು ಪಥಗಳ ಕಾಂಕ್ರಿಟ್ ರಸ್ತೆಗಳ ನಿರ್ಮಾಣ ಹಾಗೂ ಚೇಳಾಯೂರಿನ ಮಧ್ಯದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಹಾಗೂ ಗುರುಪುರ ಹೋಬಳಿಯ ಗ್ರಾಮ ಪಂಚಾಯತ್‌ಗಳಲ್ಲಿ ಸರಕಾರದ ವಿವಿಧ ಇಲಾಖೆಗಳಿಂದ ಸುಮಾರು 150 ಕೋ.ರೂ.ಗಳಿಗಿಂತಲೂ ಮಿಕ್ಕಿ ಅಭಿವೃದ್ದಿ ಕಾಮಗಾರಿ ನಡೆದಿದೆ ಎಂದರು.

ಸುರತ್ಕಲ್ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ ಇದೀಗ ಸಾಕಾರಗೊಳ್ಳುತ್ತಿದೆ. ಪಚ್ಚನಾಡಿ ವಾಮಂಜೂರು ಪ್ರದೇಶದಲ್ಲೂ ಇದೇ ರೀತಿಯ ಒಳಚರಂಡಿ ವ್ಯವಸ್ಥೆ ಜಾರಿಯಾಗಲಿದೆ. ಎನ್‌ಎಂಪಿಟಿ ಸಹಯೋಗದೊಂದಿಗೆ ಬೈಕಂಪಾಡಿಯಿಂದ ನಂತೂರುವರೆಗೆ ಸುಸಜ್ಜಿತ ಎಲ್‌ಇಡಿ ಬೀದಿದೀಪ ವ್ಯವಸ್ಥೆಯನ್ನು 98 ಲಕ್ಷ ರೂ.ಗಳಲ್ಲಿ ಅಳವಡಿಸಲಾಗಿದೆ.

ಬೈಲಾರೆ ತೋಡಿಗೆ 2.50 ಕೋ.ರೂ. ಮೊತ್ತದ ತಡೆಗೋಡೆ ಹಾಗೂ ಇತರ ಅಭಿವೃದ್ದಿ ಕಾಮಗಾರಿ ಜಾರಿಗೊಳಿಸಲಾಗಿದೆ. ಪಂಜಿಮೊಗರು ಪರಿಸರದ ವಿಶೇಷ ಅಭಿವೃದ್ದಿಗಾಗಿ ಕೆಜಿಕೆ ಬಲ್ಲಾಳ್ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ದಿಗೊಳಿಸಿ ಕಾಮಗಾರಿ ಪ್ರಗತಿಯಲ್ಲಿದೆ.

ಕಾವೂರು, ಕೃಷ್ಣಾಪುರ ಹಾಗೂ ಕಾಟಿಪಳ್ಳಗಳಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಯೋಜನೆ ಪ್ರಗತಿಯಲ್ಲಿದೆ. ಬೈಕಂಪಾಡಿ ಎಪಿಎಂಸಿ ಸ್ವಾಧೀನದಲ್ಲಿರುವ 40 ಎಕ್ರೆ ಪ್ರದೇಶವನ್ನು ವಿವಿಧ ಒಳಾಂಗಣ ಕ್ರಿಜೀಡೆಗಳ ಸುಸಜ್ಜಿತ ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News