×
Ad

ಬಿರುಸಿನ ಮಳೆಯಲ್ಲೂ ಕರ್ತವ್ಯನಿಷ್ಠೆ ಮೆರೆದ ಬೋಪಯ್ಯ!

Update: 2016-05-13 19:02 IST

ಮಂಗಳೂರು, ಮೇ 13: ಮಳೆಗಾಗಿ ಪರಿತಪಿಸುತ್ತಿದ್ದ ಮಂಗಳೂರು ನಗರವಿಡೀ ನಿನ್ನೆ ಸಂಜೆಯ ವೇಳೆಗೆ ಹಠಾತ್ತನೆ ಸುರಿದ ಭಾರೀ ಮಳೆಯನ್ನು ಸಂತಸ, ಆತಂಕ, ಕಾತರದಿಂದ ಸ್ವಾಗತಿಸಿದ್ದರೆ, ಆ ಬಿರುಸು ಮಳೆಯ ನಡುವೆಯೇ ತನ್ನ ಕರ್ತವ್ಯ ಪ್ರಜ್ಞೆ ಮೆರೆಯುವ ಮೂಲಕ ಟ್ರಾಫಿಕ್ ಪೊಲೀಸರೊಬ್ಬರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ನಗರದ ಬಂಟ್ಸ್‌ಹಾಸ್ಟೆಲ್ ಬಳಿಯ ವೃತ್ತದಲ್ಲಿ ಟ್ರಾಫಿಕ್ ಪೊಲೀಸ್ ಬಿರುಸು ಮಳೆಯಲ್ಲಿ ನೆನೆದುಕೊಂಡೇ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸಿದ್ದರು.

ಇವರ ಕಾರ್ಯನಿಷ್ಠೆಯ ಕುರಿತಂತೆ ನಿನ್ನೆ ಸಂಜೆಯಿಂದ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಫೋಟೊ, ಪ್ರಶಂಸೆೆಯ ನುಡಿಗಳು ಹರಿದಾಡುತ್ತಿವೆ. ಇಂತಹ ಕರ್ತವ್ಯನಿಷ್ಠ ವ್ಯಕ್ತಿಯನ್ನು ಪರಿಚಯಿಸುವ ಕೆಲಸವನ್ನು ‘ವಾರ್ತಾಭಾರತಿ’ ಮಾಡಿದೆ.

ಹಿರಿಯ ಅಧಿಕಾರಿಗಳಿಂದ ಪ್ರಶಂಸೆ

ಬೋಪಯ್ಯರ ಕರ್ತವ್ಯನಿಷ್ಠೆಯ ಬಗ್ಗೆ ಎಸಿಪಿ (ಸಂಚಾರ) ಉದಯ ನಾಯಕ್ ಅವರ ಪ್ರತಿಕ್ರಿಯೆ ಕೋರಿದಾಗ, ಬೋಪಯ್ಯರ ಕಾರ್ಯನಿಷ್ಠೆ ಬಗ್ಗೆ ಈಗಾಗಲೇ ಪೊಲೀಸ್ ಆಯುಕ್ತರು, ಡಿಸಿಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಡಾ ಶ್ಲಾಘಿಸಿದ್ದಾರೆ. ಕರ್ತವ್ಯಪಾಲನೆಯನ್ನು ಜನರು ಗುರುತಿಸುತ್ತಾರೆ ಎಂಬುದಕ್ಕೆ ಈ ಘಟನೆಯೊಂದು ಸಾಕ್ಷಿಯಾಗಿದೆ. ಮಾತ್ರವಲ್ಲದೆ ಇತರ ಸಿಬ್ಬಂದಿಗೂ ಇವರು ಮಾದರಿಯಾಗಿದ್ದು, ಉತ್ತಮ ಕಾರ್ಯಕ್ಕೆ ಪ್ರೇರಣೆಯಾಗಿದ್ದಾರೆ ಎಂದರು.

‘‘ಮಳೆ ಬಂತೆಂದು ನಾನು ಬದಿಗೆ ಸರಿದರೆ ಟ್ರಾಫಿಕ್‌ನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ನನ್ನ ಕರ್ತವ್ಯವನ್ನು ನಿರ್ವಹಿಸುವುದು ನನ್ನ ಕರ್ತವ್ಯ’’ ಎಂದು ಬೋಪಯ್ಯ ಪ್ರತಿಕ್ರಿಯಿಸುತ್ತಾರೆ.

ಮೂಲತ ಕೊಡಗಿನವರಾದ ಬೋಪಯ್ಯ 1998ರಿಂದ 2004ರವರೆಗೆ ಟ್ರಾಫಿಕ್ ಪೊಲೀಸ್ ಆಗಿ ಕಾರ್ಯ ನಿರ್ವಹಿಸಿ ಬಳಿಕ ಕೆಲ ವರ್ಷ ಕಂಕನಾಡಿ, ಕಾವೂರು ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಮತ್ತೆ ಒಂದು ವರ್ಷದಿಂದ ಟ್ರಾಫಿಕ್ ಪೊಲೀಸ್ ಕಾರ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News