ಬಾಳಿಗಾ ಹತ್ಯೆ ಪ್ರಕರಣದ ದುಷ್ಟಶಕ್ತಿಗಳು ಯಾರೆಂದು ಜಿಎಸ್‌ಬಿ ರಕ್ಷಣಾ ವೇದಿಕೆ ಬಹಿರಂಗಪಡಿಸಲಿ: ನರೇಂದ್ರ ನಾಯಕ್
ಮಂಗಳೂರು, ಮೇ 13: ಕಾಶೀಮಠ ಸಂಸ್ಥಾನದ ಭಕ್ತರು ಸೇರಿ ರಚಿಸಿರುವ ಜಿಎಸ್‌ಬಿ ರಕ್ಷಣಾ ವೇದಿಕೆಯು ವಿನಾಯಕ್ ಬಾಳಿಗಾ ಹತ್ಯೆ ಪ್ರಕರಣದಲ್ಲಿ ದುಷ್ಟ ಶಕ್ತಿಗಳು ಕೈಜೋಡಿಸಿದೆ ಎಂದು ಆರೋಪಿಸಿದ್ದು, ಈ ದುಷ್ಟಶಕ್ತಿಗಳು ಯಾರು ಎಂದು ಅವರು ಬಹಿರಂಗಪಡಿಸಲಿ ಎಂದು ಅಖಿಲ ಭಾರತ ವಿಚಾರವಾದಿಗಳ ವೇದಿಕೆಯ ಅಧ್ಯಕ್ಷ ನರೇಂದ್ರ ನಾಯಕ್ ಆಗ್ರಹಿಸಿದ್ದಾರೆ.
ಆರ್‌ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗಾರ ನಿವಾಸದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನಾಯಕ್ ಬಾಳಿಗ ಜಿಎಸ್‌ಬಿ ಸಮುದಾಯದವರಾಗಿದ್ದರೂ ಅವರ ಹತ್ಯೆಯಾದ ಬಳಿಕ ಅವರ ಕುಟುಂಬಕ್ಕೆ ರಕ್ಷಣೆ ನೀಡಲು ಮುಂದಾಗದ ಜಿಎಸ್‌ಬಿ ರಕ್ಷಣಾ ವೇದಿಕೆ ಪತ್ರಿಕೆಗಳಲ್ಲಿ ಜಿಎಸ್‌ಬಿ ಸಮುದಾಯಕ್ಕೆ, ಕಾಶಿ ಮಠಕ್ಕೆ ಸಂಬಂಧಿಸಿದವರೊಬ್ಬರ ಹೆಸರು ಪ್ರಕಟವಾದ ತಕ್ಷಣ ಪೊಲೀಸ್ ಕಮಿಷನರ್‌ಗೆ ಮನವಿ ನೀಡಿ ಸಭೆಯನ್ನು ನಡೆಸಿದ್ದಾರೆ ಎಂದು ಹೇಳಿದರು.
ಜಿಎಸ್‌ಬಿ ರಕ್ಷಣಾ ವೇದಿಕೆ ಅಪರಾಧಿಗಳ ರಕ್ಷಣಾ ವೇದಿಕೆ
ಜಿಎಸ್‌ಬಿ ರಕ್ಷಣಾ ವೇದಿಕೆಯು ಜಿಎಸ್‌ಬಿ ಅಪರಾಧಿಗಳ ರಕ್ಷಣಾ ವೇದಿಕೆಯೇ ಎಂಬ ಪ್ರಶ್ನೆ ಮೂಡುತ್ತದೆ. ಅವರು ನಿಜವಾಗಿ ಹತ್ಯೆಗೊಳಗಾದ ವಿನಾಯಕ್ ಬಾಳಿಗಾ ಕುಟುಂಬಕ್ಕೆ ರಕ್ಷಣೆ ನೀಡಬೇಕಿತ್ತು. ಆದರೆ ಅವರಿಗೆ ರಕ್ಷಣೆ ನೀಡುತ್ತಿಲ್ಲ. ಬದಲಾಗಿ ಅವರ ರಕ್ಷಣೆಗೆ ಬಂದವರನ್ನು ದುಷ್ಟಶಕ್ತಿಗಳು ಷಡ್ಯಂತ್ರ ನಡೆಸುತ್ತಿದೆ ಎಂದು ಟೀಕಿಸುತ್ತಿದ್ದಾರೆ ಎಂದು ಹೇಳಿದರು.
ವಿನಾಯಕ್ ಬಾಳಿಗಾರ ಹತ್ಯೆಯಾಗಿ 45 ದಿನಗಳು ಕಳೆದರೂ ಜಿಎಸ್‌ಬಿ ರಕ್ಷಣಾ ವೇದಿಕೆ ಧ್ವನಿಯೆತ್ತಿಲ್ಲ. ಸಮಾಜದ ವ್ಯಕ್ತಿಯೊಬ್ಬರು ಕೊಲೆಯಾಗಿದ್ದರೂ ಇವರಿಗೆ ವಿನಾಯಕ್ ಬಾಳಿಗಾರ ಕುಟುಂಬಕ್ಕೆ ರಕ್ಷಣೆ ಕೊಡಲು ಸಮಯಾವಕಾಶವಿರಲಿಲ್ಲ ಎಂದು ಹೇಳಿದರು.
ವಿನಾಯಕ್ ಬಾಳಿಗಾ ಹತ್ಯೆಯನ್ನು ಜಿಎಸ್‌ಬಿ ಸಮುದಾಯದ ಶೇ.90 ಮಂದಿ ಖಂಡಿಸುತ್ತಿದ್ದಾರೆ. ಆದರೆ ಅವರಿಗೆ ಅದನ್ನು ಎದುರು ಬಂದು ವಿರೋಧಿಸಲು ಸಾಧ್ಯವಾಗುತ್ತಿಲ್ಲ. ಯಾವುದೇ ಕಾರಣಕ್ಕೂ ಈ ಹೋರಾಟವನ್ನು ನಿಲ್ಲಿಸುವುದಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯುತ್ತದೆ. ಪ್ರಕರಣದ ಆರೋಪಿಗಳ ಬಂಧನವಾಗದಿದ್ದರೆ ದೊಡ್ಡ ರೀತಿಯಲ್ಲಿ ಹೋರಾಟ ಮಾಡಲಾಗುವುದು ಮತ್ತು ಬೆಂಗಳೂರಿನಲ್ಲಿಯೂ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಹೇಳಿದರು.
ವಿನಾಯಕ್ ಬಾಳಿಗಾ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನನಗೆ ಬಂದ ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ದೂರು ದಾಖಲಿಸಿದ ಮರುದಿನವೇ ಆರೋಪಿ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದುಕೊಂಡಿದ್ದಾನೆ. ಈತ ವಿನಾಯಕ್ ಬಾಳಿಗಾ ಹತ್ಯೆ ಪ್ರಕರಣದ ಆರೋಪಿ ನರೇಶ್ ಶೆಣೈ ಬೆಂಬಲಿಗನ ಸಂಬಂಧಿಯಾಗಿದ್ದಾನೆ . ಜಿಎಸ್‌ಬಿ ರಕ್ಷಣಾ ವೇದಿಕೆಯಲ್ಲಿರುವವರಲ್ಲಿ ಐದು ಮಂದಿ ಆರೋಪಿ ನರೇಶ್ ಶೆಣೈ ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸಿದವರು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದ ವಿನಾಯಕ್ ಬಾಳಿಗಾರ ಸಹೋದರಿಯರಾದ ಉಷಾ ಮತ್ತು ಶ್ವೇತಾ ಪೈ ಮಾತನಾಡಿ, ಮೇ 9ರಂದು ನಡೆದ ಸಭೆಯಲ್ಲಿ ನಾವು ಭಾಗಿಯಾಗಿದ್ದು ಈ ಸಭೆಯಲ್ಲಿ ಕೇವಲ ವಿನಾಯಕ್ ಬಾಳಿಗಾ ಹತ್ಯೆಗೆ ನಮ್ಮ ಸಂತಾಪ ಎಂದು ಮಾತ್ರ ಹೇಳಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಯಾರೂ ಮನೆಗೆ ಬಂದು ಸಂತಾಪ ಸೂಚಿಸಿಲ್ಲ. ಆದರೆ ಸಭೆಯಲ್ಲಿ ಕಾಶೀಮಠಕ್ಕೆ ಮತ್ತು ಜಿಎಸ್‌ಬಿ ಸಮುದಾಯಕ್ಕೆ ಹೆಸರು ಕೆಡಿಸಲು ದುಷ್ಟಶಕ್ತಿಗಳು ಷಡ್ಯಂತ್ರ ರೂಪಿಸುತ್ತಿವೆ ಎಂದು ಹೇಳಿದರು.
ನಾವು ಯಾರು ಕೂಡ ಜಿಎಸ್‌ಬಿ ಸಮುದಾಯ ಮತ್ತು ಕಾಶೀ ಮಠದ ಹೆಸರನ್ನು ಪ್ರಸ್ತಾಪಿಸಿಲ್ಲ ಎಂದು ಹೇಳಿದರು. ಅವರು ಆರೋಪಿಸಿರುವ ದುಷ್ಟ ಶಕ್ತಿಗಳು ಯಾರು ಎಂದು ಅವರೇ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲ ವಾಸುದೇವ್ ರಾವ್, ವಿವಿಧ ಸಂಘಟನೆಗಳ ಮುಖಂಡರುಗಳಾದ ದೇವದಾಸ್, ಸಂತೋಷ್ ಬಜಾಲ್, ರಘು ಎಕ್ಕಾರ್ ಉಪಸ್ಥಿತರಿದ್ದರು.