ಪುತ್ತೂರು: ಸಿಡಿಲು ಬಡಿದು ಮನೆಗೆ ಹಾನಿ
Update: 2016-05-13 20:48 IST
ಪುತ್ತೂರು, ಮೇ 13: ಸಿಡಿಲು ಬಡಿದು ಮನೆಗೆ ಹಾನಿಯಾದ ಘಟನೆ ಶುಕ್ರವಾರ ರಾತ್ರಿ ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಕಾವು ಸಿಆರ್‌ಸಿ ಕಾಲೊನಿಯಲ್ಲಿ ನಡೆದಿದೆ.
ಕಾವು ತಮಿಳು ಸಿಆರ್‌ಸಿ ಕಾಲೊನಿಯ ನಿವಾಸಿ ಪಿ.ಎಸ್.ಮಲ್ಲಿಕ್ ಶೆಟ್ಟಿ ಎಂಬವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ.
ಸಿಡಿಲಿನ ಅಬ್ಬರಕ್ಕೆ ಮನೆಯ ಹಂಚು ಹಾರಿ ಹೋಗಿದ್ದು, ವಿದ್ಯುತ್ ಕಂಬದಿಂದ ಮನೆಗೆ ಸಂಪರ್ಕ ಹೊಂದಿದ್ದ ಸರ್ವೀಸ್ ವಯರ್ ಮತ್ತು ಮನೆಯ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದೆ. ಘಟನೆಯ ವೇಳೆ ಮನೆಯಲ್ಲಿ ಮಲ್ಲಿಕ್ ಶೆಟ್ಟಿ ಒಬ್ಬರೇ ಇದ್ದರು ಎಂದು ತಿಳಿದು ಬಂದಿದೆ.
ಮಲ್ಲಿಕ್ ಶೆಟ್ಟಿ ಕೆಎಫ್‌ಡಿಸಿ ನೌಕರರಾಗಿದ್ದು, ಕೆಎಫ್‌ಡಿಸಿ ಕ್ವಾಟ್ರಸ್‌ನಲ್ಲಿ ವಾಸ್ತವ್ಯವಿದ್ದರು. ಘಟನೆಯ ಮಾಹಿತಿ ಪಡೆದು ಶನಿವಾರ ಕೆಎಫ್‌ಡಿಸಿ ಅಧಿಕಾರಿಗಳು, ಅರಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಮತ್ತು ಸದಸ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ.