ಬೆಳ್ತಂಗಡಿ ತಾಲೂಕಿನಾದ್ಯಂತ ಗಾಳಿ, ಮಳೆ: ಹಲವೆಡೆ ಹಾನಿ
ಬೆಳ್ತಂಗಡಿ, ಮೇ 13:ತಾಲೂಕಿನಾದ್ಯಂತ ಸಿಡಿಲು, ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಸಿಡಿಲು ಹಾಗೂ ಗಾಳಿಯ ಅಬ್ಬರಕ್ಕೆ ಕೆಲವು ಕಡೆ ಹಾನಿ ಉಂಟಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.
ಗಾಳಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ, ದೂರವಾಣಿ ಸಂಪರ್ಕಗಳು ಸ್ಥಗಿತವಾಗಿದೆ. ಕೆಲವೆಡೆ ವಿದ್ಯುತ್ ಕಂಬಗಳು ಧರಾಶಾಹಿಯಾಗಿದೆ. ನಡ ಗ್ರಾಮದ ಕೇಳ್ತಾಜೆ, ಮುಂಡಾಜೆ ಸಮೀಪದ ಸೀಟ್, ಗೇರುಕಟ್ಟೆ ಸಮೀಪ ರೇಶ್ಮೆ ರೋಡ್ ಮೊದಲಾದ ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿದೆ. ಮೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಕಂಬಗಳನ್ನು ಬದಲಾಯಿಸಿ ವಿದ್ಯುತ್ ಸಂಪರ್ಕ ಕೊಡುವ ಕೆಲಸ ಮಾಡಿದ್ದಾರೆ.
ಪುಂಜಾಲಕಟ್ಟೆಯ ಬಸವನಗುಡಿ ಸಮೀಪದ ಕೊಡ್ಯೇಲು ಸವಿತಾ ಎಂಬವರ ಮನೆಗೆ ಸಿಡಿಲು ಬಡಿದು ಹಾನಿ ಘಟನೆ ಗುರುವಾರ ಸಂಜೆ ನಡೆದಿದೆ. ಸವಿತಾ ತಮ್ಮ ತವರು ಮನೆಯಲ್ಲಿ ಕಾರ್ಯಕ್ರಮ ಇದ್ದ ಕಾರಣ, ಮಕ್ಕಳ ಜೊತೆಗೆ ತವರು ಮನೆಗೆ ಹೋಗಿದ್ದರು. ಗುರುವಾರ ಸಂಜೆ ಸಿಡಿಲು ಮನೆಗೆ ಬಡಿದು ಮನೆಯ ಗೋಡೆ ಮತ್ತು ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು ಸೇರಿದಂತೆ ವೈರಿಂಗ್ ಸಂಪೂರ್ಣ ಕಿತ್ತು ಹೋಗಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದರು.
ಸಿಡಿಲಿನ ಸದ್ದಿಗೆ ಉಜಿರೆ - ಬೆಳಾಲು ರಸ್ತೆಯ ಉಂಡ್ಯಾಪು ಶ್ಯಾಮ ಅರಿಪ್ಪಾಡಿತ್ತಾಯರ ಪತ್ನಿ ಮೋಹಿನಿ ಅರಿಪ್ಪಾಡಿತ್ತಾಯ(64) ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಿಡಿಲಿನ ದೊಡ್ಡ ಶಬ್ದಕ್ಕೆ ಕುಸಿದು ಬಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಿ ಮೃತಪಟ್ಟಿದ್ದರು.
ಇಂದಬೆಟ್ಟು ಗ್ರಾಮದ ನೂಜಿಲೆ ಎಂಬಲ್ಲಿ ಶ್ರೀನಿವಾಸ ಆಚಾರ್ ಎಂಬವರ ಮನೆಗೆ ಸಿಡಿಲು ಬಡಿದು ಮನೆಗೆ ಹಾನಿಯಾಗಿದೆ. ಮನೆಯ ಗೋಡೆಗಳು ಬಿರುಕು ಬಿಟ್ಟಿದೆ. ಮನೆಯಲ್ಲಿದ್ದ ಮೋಹಿನಿಯವರಿಗೆ ಸಿಡಿಲಿನ ಶಾಖ ತಾಗಿದ್ದು ಅಲ್ಪಸ್ವಲ್ಪ ಗಾಯವಾಗಿದೆ. ತಾಪಂ ಉಪಾಧ್ಯಕ್ಷೆ ವೇದಾವತಿ, ಪಂಚಾಯತ್ ಅಧಿಕಾರಿಗಳು, ಗ್ರಾಮಕರಣಿಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.