ಸಂಶೋಧನೆಗೆ ಯುವಜನರು ಒತ್ತು ನೀಡಬೇಕು: ಪ್ರೊ. ಜೋಗನ್ ಶಂಕರ್
ಕೊಣಾಜೆ, ಮೇ 13: ಸಾಮಾಜಿಕ ಬಿಕ್ಕಟ್ಟು ಪರಿಹಾರ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಮಾಜಶಾಸ್ತ್ರ ಪ್ರಮುಖ ಪಾತ್ರವನ್ನು ವಹಿಸಿದೆ. ಆದರೆ ಸಮಾಜ ಬದಲಾಗುತ್ತಿರುವಂತೆ ಸಮಾಜಶಾಸ್ತ್ರದ ಪಠ್ಯಕ್ರಮ ಇನ್ನೂ ಬದಲಾಗಿಲ್ಲ. 19ನೆ ಶತಮಾನದಂತೆ ಪಠ್ಯಕ್ರಮ ಮುಂದುವರಿದಿರುವುದು ಯುವಸಮುದಾಯವನ್ನು ಆಕರ್ಷಿಸದಂತೆ ಮಾಡುತ್ತಿದೆ. ಈ ಕುರಿತು ಶಾಸ್ತ್ರಜ್ಞರು ಗಂಭೀರ ಚಿಂತನೆ ನಡೆಸಿ ಸಮಾಜಶಾಸ್ತ್ರದ ಅಧ್ಯಯನದಲ್ಲಿ ಬದಲಾವಣೆಯನ್ನು ತರುವ ಮೂಲಕ ಸಮಾಜದ ಬೆಳವಣಿಗೆಯಲ್ಲಿ ಶ್ರಮವಹಿಸುವ ಪ್ರಯತ್ನ ಮಾಡಬೇಕಿದೆ ಎಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜೋಗನ್ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಆಶ್ರಯದಲ್ಲಿ ಐಸಿಎಸ್‌ಎಸ್‌ಆರ್ ಪ್ರಾಯೋಜಕತ್ವದಲ್ಲಿ ‘ಭಾರತದಲ್ಲಿ ಸಮಾಜಶಾಸ್ತ್ರ ಮತ್ತು ಸ್ಥಳೀಯ ಸಂಶೋಧನೆಯ ಬೆಳವಣಿಗೆ’ ’ ಕುರಿತ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಎಂಬಿಎ ಹಾಲ್‌ನಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸಾಮಾಜಿಕ ಅಭಿವೃದ್ಧಿಯಲ್ಲಿ ಸಮಾಜಶಾಸ್ತ್ರದ ಕೊಡುಗೆ ಅಪಾರ. ಸಮಾಜವು ಕಾಲದಿಂದ ಕಾಲಕ್ಕೆ ಬದಲಾವಣೆ ಹೊಂದುತ್ತಿರುವಂತೆ ಸಮಾಜಶಾಸ್ತ್ರ ಮತ್ತು ಸಂಶೋಧನಾ ಕ್ಷೇತ್ರದಲ್ಲೂ ನೂತನ ಆವಿಷ್ಕಾರದೊಂದಿಗೆ ಮುನ್ನಡೆಯಬೇಕಾದ ಅಗತ್ಯ ಇದೆ ಎಂದು ಅವರು ಅಭಿಪ್ರಾಯ ಪಟ್ಟರು.
ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ ಹಾಗೂ ಹೊಸದಿಲ್ಲಿ ಸಾಮಾಜಿಕ ವಿಜ್ಞಾನ ಸಂಸ್ಥೆ (ಐಎಸ್‌ಎಸ್)ನ ಕಾರ್ಯದರ್ಶಿ ಪ್ರೊ.ಆರ್.ಇಂದಿರಾ ಮಾತನಾಡಿ, ಅಧ್ಯಯನದಲ್ಲಿ ಮಡಿವಂತಿಕೆಯನ್ನು ಬಿಟ್ಟು ದೇವದಾಸಿ ಪದ್ಧತಿ ಕುರಿತ ಅಧ್ಯಯನ ನಡೆಸಿ ದೇವದಾಸಿ ಪುನರ್ವಸತಿ ಕೇಂದ್ರ ಸ್ಥಾಪಿಸುವ ಮೂಲಕ ದೇಶದಲ್ಲಿಯೇ ಸಮಾಜಶಾಸ್ತ್ರ ರಂಗಕ್ಕೆ ಕೀರ್ತಿ ತರುವಲ್ಲಿ ಜೋಗನ್ ಶಂಕರ್ ನಡೆಸಿರುವ ಕಾರ್ಯ ಶ್ಲಾಘನೀಯ. ಸಾಮಾಜಿಕ ಪಿಡುಗುಗಳ ಅಧ್ಯಯನಕ್ಕೆ ಹೆಚ್ಚಿನ ಒತ್ತನ್ನು ಸಮಾಜಶಾಸ್ತ್ರ ವಿದ್ಯಾರ್ಥಿಗಳು, ಸಂಶೋಧಕರು ನೀಡಬೇಕಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ತಿರುವನಂತಪುರದ ಕೇರಳ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಹೊಸದಿಲ್ಲಿ ಐಎಸ್‌ಎಸ್‌ನ ಮಾಜಿ ಅಧ್ಯಕ್ಷ ಪ್ರೊ.ಜಾಕಬ್ ಜಾನ್ ಕಟ್ಟಕಾಯಂ, ಭಾರತದಲ್ಲಿ ಸಮಾಜಶಾಸ್ತ್ರ ಮತ್ತು ಸ್ಥಳೀಯ ಸಂಶೋಧನೆಯ ಬೆಳವಣಿಗೆಯ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಬೈರಪ್ಪ ಮಾತನಾಡಿ, ಸಾಮಾಜಿಕ ತೊಂದರೆಗಳ ಅಧ್ಯಯನ ನಡೆಸಲು ಪರಿಣತರ ಅಗತ್ಯತೆ ಇದ್ದು, ಸಾಂಪ್ರದಾಯಿಕ ಮಾನವೀಯತೆಯೊಂದಿಗೆ ಸಾರ್ವಜನಿಕ ಆರೋಗ್ಯ ಹಾಗೂ ಔದ್ಯೋಗಿಕ ಆರೋಗ್ಯದ ಕುರಿತು ಹೆಚ್ಚಿನ ಒತ್ತು ಸಮಾಜಶಾಸ್ತ್ರ ಅಧ್ಯಯನ ನಡೆಸುವವರಿಂದ ಆಗಬೇಕಿದೆ ಎಂದರು.
ಕಾರ್ಯಕ್ರಮದ ಸಂಘಟಕ ಡಾ.ವಿನಯ್ ರಜತ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಸಬೀತಾ ಸನ್ಮಾನಿತರ ವಿವರ ನೀಡಿದರು. ಸಹಾಯಕ ಪ್ರಾಧ್ಯಾಪಕ ಗೋವಿಂದರಾಜ್ ವಂದಿಸಿದರು. ವಿದ್ಯಾರ್ಥಿಗಳಾದ ಶಬನಾ, ಹೇಮಲತಾ, ಅಮಿತ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ಕುವೆಂಪು ವಿ.ವಿ ಕುಲಪತಿಯಾಗಿ ನೇಮಕಗೊಂಡ ಪ್ರೊ.ಜೋಗನ್ ಶಂಕರ್‌ರನ್ನು ಸಮಾಜಶಾಸ್ತ್ರ ವಿಭಾಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.