ದೇಶದ 26 ವಿಮಾನ ನಿಲ್ದಾಣಗಳಲ್ಲಿ ಸ್ವಯಂ ಚೆಕ್-ಇನ್ ವ್ಯವಸ್ಥೆ ಜಾರಿಗೊಳಿಸಿದ ವಿಮಾನ ಸಂಸ್ಥೆ
ಹೊಸದಿಲ್ಲಿ, ಮೇ 13: ವಿಮಾನ ಪ್ರಯಾಣವನ್ನು ಮತ್ತಷ್ಟು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಮಂಗಳೂರು ವಿಮಾನ ನಿಲ್ದಾಣವೂ ಸೇರಿದಂತೆ 26 ದೇಶೀಯ ವಿಮಾನ ನಿಲ್ದಾಣಗಳಲ್ಲಿ ಸ್ವಯಂ ಚೆಕ್‌ಇನ್ ವ್ಯವಸ್ಥೆ ಜಾರಿಗೆ ತಂದಿದೆ. ಈ ವ್ಯವಸ್ಥೆ ಜಾರಿಯಾದ ನಿಲ್ದಾಣಗಳಲ್ಲಿ ಮುಂಬಯಿ, ಚೆನ್ನೈ, ದಿಲ್ಲಿ ಮತ್ತು ಹೈದರಾಬಾದ್ ಕೂಡ ಸೇರಿವೆ.
ಈ ನಿಲ್ದಾಣಗಳಲ್ಲಿ ಪ್ರಯಾಣಿಕರು ಇನ್ನು ಮುಂದೆ ಚೆಕ್‌ಇನ್‌ಗಾಗಿ ಮಾರುದ್ದದ ಕ್ಯೂ ನಿಲ್ಲಬೇಕಾಗಿಲ್ಲ. ಅದಕ್ಕೆಂದೇ ನಿಗದಿಯಾದ ಬ್ಯಾಗೇಜ್ ಕೌಂಟರ್‌ಗಳಲ್ಲಿ ತಮ್ಮ ಲಗೇಜುಗಳನ್ನು ಕೊಟ್ಟುಬಿಟ್ಟರಾಯಿತು.
‘ಕಾಮನ್ ಯೂಸ್ ಸೆಲ್ಫ್ ಸರ್ವಿಸ್’ ಹೆಸರಿನ ಈ ಕಿಯೋಸ್ಕ್‌ಗಳು ಮೇ 1ರಿಂದ ಜಾರಿಗೆ ಬಂದಿವೆ. ಇದರಿಂದಾಗಿ ವಿಮಾನ ನಿಲ್ದಾಣದಲ್ಲಿ ಕಳೆಯಬೇಕಾದ ಸಮಯವನ್ನು ತಗ್ಗಿಸಬಹುದು ಎಂದು ಏರ್ ಇಂಡಿಯಾ ಪ್ರಕಟನೆ ತಿಳಿಸಿದೆ.
ದೇಶದಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯ ವಿಮಾನ ನಿಲ್ದಾಣಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತಂದ ಮೊದಲ ವಿಮಾನ ಸಂಸ್ಥೆಯೆಂಬ ಹೆಗ್ಗಳಿಕೆ ಏರ್ ಇಂಡಿಯಾಗೆ ಸಂದಿದೆ. ಔರಂಗಾಬಾದ್, ಬೆಂಗಳೂರು, ಭೋಪಾಲ್, ಭುವನೇಶ್ವರ, ಕಲ್ಲಿಕೋಟೆ, ಕೊಯಮತ್ತೂರು, ಕೊಚ್ಚಿ, ಚೆನ್ನೈ, ಗೋವಾ, ಹೈದರಾಬಾದ್, ಇಂದೋರ್, ಜೈಪುರ್, ಜಾಮ್‌ನಗರ್, ಜೋಧ್‌ಪುರ, ಕೋಲ್ಕತಾ, ಲಕ್ನೊ, ನಾಗಪುರ, ಹೊಸದಿಲ್ಲಿ, ಮುಂಬಯಿ, ಮಂಗಳೂರು, ರಾಯ್‌ಪುರ, ರಾಜಕೋಟ್, ತಿರುವನಂತಪುರಂ, ಉದಯಪುರ, ವಿಶಾಖಪಟ್ಟಣ, ವಾರಣಾಸಿ ನಿಲ್ದಾಣಗಳಲ್ಲಿ ಈ ಸೌಲಭ್ಯ ಜಾರಿಗೆ ಬಂದಿದೆ.