ಅಂದು ಸೈಕಲ್ ಕಳ್ಳ ಇಂದು ಆಗರ್ಭ ಶ್ರೀಮಂತ ಆತ ಬಿಂದಿ ಯಾದವ್.. !

Update: 2016-05-14 05:49 GMT

ಪಾಟ್ನಾ, ಮೇ 14:  ಒಂದೊಮ್ಮೆ   ಆತ ಓರ್ವ ಸೈಕಲ್‌ ಕಳ್ಳನಾಗಿದ್ದ. ಈಗ ಅವನು  ಆಗರ್ಭ  ಶ್ರಿಮಂತ. ಅಪಾಯಕಾರಿ ವ್ಯಕ್ತಿ. ಬಿಹಾರ ರಾಜಕೀಯದಲ್ಲಿ ಪ್ರಭಾವಿ ವ್ಯಕ್ತಿ.  ಅವರು ಬೇರೆ ಯಾರೂ ಅಲ್ಲ ಬಿಹಾರದ ಎಂಎಲ್‌ಸಿ ಮನೋರಮಾ ದೇವಿ ಪತಿ ಬಿಂದಿ ಯಾದವ್‌.  ಕಾರನ್ನು ಓವರ್‌ಟೇಕ್‌ ಮಾಡಿದ ತಪ್ಪಿಗಾಗಿ ಯುವಕ ಆದಿತ್ಯ ಸಚಿದೇವ್‌ನನ್ನು ಗುಂಡು ಹಾರಿಸಿ ಕೊಲೆ ನಡೆಸಿದ ಆರೋಪದಲ್ಲಿ ಜೈಲು ಸೇರಿರುವ ರಾಕಿ ಯಾದವ್‌  ತಂದೆ.
ಬಿಂದೇಶ್ವರಿ ಪ್ರಸಾದ್ ಯಾದವ್ ಯಾನೆ ಬಿಂದಿ ಯಾದವ್ 1980ರ ಹೊತ್ತಿಗೆ ಯಾದವ್‌  ಗಯಾದಲ್ಲಿ ಚಿಲ್ಲರೆ ಕಳ್ಳನಾಗಿದ್ದ. ಸೈಕಲ್‌ ಕಳ್ಳತನದ ದಂದೆಯಲ್ಲಿ ತೊಡಗಿದ್ದನು. ಬಳಿಕ ಓರ್ವ ಕ್ರಿಮಿನಲ್‌ ಆಗಿ ಬೆಳೆದು ಬಿಹಾರ ನಗರದಲ್ಲಿ ಕುಖ್ಯಾತಿ ಗಳಿಸಿದನು.
ಗಯಾದಲ್ಲಿ ಸಾಕಷ್ಟು ಆಸ್ತಿಪಾಸ್ತಿ ಕಬಳಿಸಿದ ಬಿಂದಿ ಯಾದವ್‌ ಕುಖ್ಯಾತ ಕ್ರಮಿನಲ್‌ಗಳ ಸಂಪರ್ಕಕ್ಕೆ ಬಂದನು. ಬಂದೂಕು ತೋರಿಸಿ ಬೆದರಿಸುತ್ತಾ ಹಲವರ ಆಸ್ತಿಗಳನ್ನು ಗುಳುಂ ಮಾಡಿದ್ದನು. ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್‌  ಮುಖ್ಯ  ಮಂತ್ರಿಯಾಗಿದ್ದಾಗ ಬಿಹಾರದಲ್ಲಿ ಕ್ರಿಮಿನಲ್‌ಗಳ ಅಟ್ಟಹಾಸಕ್ಕೆ ಹಲವು ಮಂದಿ ಬಲಿಯಾಗಿದ್ದರು. ಕ್ರಿಮಿನಲ್‌ಗಳಾದ  ಸುರೇಂದ್ರ ಯಾದವ್‌, ರಾಜೇಂದ್ರ ಯಾದವ್‌ , ಮಹೇಶ್ವರ ಯಾದವ್‌ ಗ್ಯಾಂಗ್‌ ಸೇರಿದ ಬಿಂದಿ ಯಾದವ್‌ ಎತ್ತರಕ್ಕೆ ಬೆಳೆದನು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಿದ್ದಾರೆ.
ಬಿಹಾರದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಸಂಪರ್ಕಕ್ಕೆ ಬಂದ  ಬಿಂದಿ ಯಾದವ್‌ ಬಳಿಕ ರಾಜಕಾರಣಿಯಾಗಿ ಬದಲಾದನು. 2001ರಲ್ಲಿ  ಆರ್‌ಜೆಡಿ ಬೆಂಬಲದೊಂದಿಗೆ ಗಯಾ ಡಿಸ್ಟ್ರೀಕ್ಟ್‌ ಬೋರ್ಡ್  ಚೇರ್ಮನ್‌ ಆಗಿ ಅವಿರೋಧವಾಗಿ ಆಯ್ಕೆಯಾದ ಬಿಂದಿ ಯಾದವ್‌ 2006ರ ತನಕ ಅಧಿಕಾರದಲ್ಲಿದ್ದನು.
2005ರಲ್ಲಿ ವಿಧಾನಸಭಾ ಚುನಾವಣೆಗೆ ಗಯಾ(ಗ್ರಾಮೀಣ) ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ ಬಿಂದಿ ಯಾದವ್‌ಗೆ ಆರ್‌ಜೆಡಿ ಟಿಕೆಟ್‌ ನಿರಾಕರಿಸಲಾಯಿತು. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಬಿಂದಿ ಯಾದವ್‌ಗೆ ನಿರೀಕ್ಷಿಸಿದಷ್ಟು ಮತಗಳು ದೊರೆಯಲಿಲ್ಲ.
2010ರಲ್ಲಿ ಆರ‍್ ಜೆಡಿ ಟಿಕೆಟ್ ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ ಬಿಂದಿ ಯಾದವ್‌ಗೆ ಗೆಲುವು ದೊರೆಯಲಿಲ್ಲ. 18 ಕ್ರಿಮಿನಲ್‌ ಪ್ರಕರಣಗಳು ಈತನ ಮೇಲಿದ್ದರೂ, ಲಾಲೂ ಪ್ರಸಾದ್‌ ಯಾದವ್‌  ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಆತನಿಗೆ ರಾಜಕಾರಣಿಯಾಗಿ  ಬೆಳೆಯಲು ಸಾಕಷ್ಟು ಬೆಂಬಲ ನೀಡಿದರು. 
ನಿತೀಶ್‌ ಕುಮಾರ್‌ 2010ರಲ್ಲಿ ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಿಂದಿ ಯಾದವ್‌ ರಾಜಕೀಯದಿಂದ ದೂರವಾಗಿ ಮತ್ತೆ ಕ್ರಿಮಿನಲ್‌ ಚಟುವಟಿಕೆಗಳಿಗೆ ಗಮನ ಹರಿಸಿದನು. 2011ರಲ್ಲಿ ಪೊಲೀಸರು ಬಿಂದಿ ಯಾದವ್‌ನನ್ನು ಬಂಧಿಸಿದಾಗ ಆತನ ಬಳಿ ಎಕೆ-47 ರೈಫಲ್‌ ಸಿಕ್ಕಿತ್ತು. 
ಬಿಂದಿ ಯಾದವ್‌ ಗುತ್ತಿಗಾರನಾಗಿ ಗುರುತಿಸಿಕೊಂಡು ಸರಕಾರದ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ಪಡೆದು ಓರ್ವ ಆಗರ್ಭ ಶ್ರೀಮಂತನಾಗಿ ಬೆಳೆದನು. ಗಯಾ, ದಿಲ್ಲಿಯಲ್ಲಿ ಹಲವು ಮಾಲ್‌, 15 ಪೆಟ್ರೋಲ್‌ ಬಂಕ್‌ಗಳ ಒಡೆಯನಾಗಿರುವ  ಬಿಂದಿ ಯಾದವ್‌ ಓರ್ವ ಅಬಕಾರಿ ಗುತ್ತಿಗೆದಾರನಾಗಿ ಕೋಟ್ಯಂತರ ಹಣ ಗಳಿಸಿದ್ದಾನೆ.
ಬಿಂದಿ ಯಾದವ್‌ ವಿರುದ್ಧ 19 ಕ್ರಿಮಿನಲ್‌ ಕೇಸ್‌ ದಾಖಲಾಗಿದೆ.. ಈ ಪೈಕಿ 11 ಪ್ರಕರಣಗಳು ಅಪರಣ ಮತ್ತು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದೆ ಎಂದು ದಾಖಲೆಗಳಿಂದ ತಿಳಿದು ಬಂದಿದೆ.
ಬಿಂದಿ ಯಾದವ್‌ ಬಳಿ 1.5 ಕೋಟಿ ರೂ. ಮೌಲ್ಯದ ಸುವ್‌ ಕಾರ್‌ ಇದೆ. ಇದೇ ಕಾರ್‌ನಲ್ಲಿ ಆತನ ಮಗ ರಾಕಿ ಯಾದವ್‌  ಓವರ‍್ ಟೇಕ್‌ ಮಾಡಿದ ಆರೋಪದಲ್ಲಿ ಉದ್ಯಮಿ ಮಗ ಆದಿತ್ಯ ಸಚಿದೇವ್‌ನನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದನು. ಗುಂಡು ಹಾರಿಸಲು ರಾಕಿ ಯಾದವ್‌ . ಇಟಲಿಯನ್  ನಿರ್ಮಿತ  ಪಿಸ್ತೂಲ್ ಬಳಸಿದ್ದನೆಂದು ಹೇಳಲಾಗಿದೆ.
2015ರಲ್ಲಿ ಪತ್ನಿ ಮನೋರಮಾ ದೇವಿ ಅವರನ್ನು ಜೆಡಿ-ಯು ಎಂಎಲ್‌ಸಿ ಆಗಿ  ರೂಪಿಸುವಲ್ಲಿ ಯಶಸ್ವಿಯಾದ ಬಿಂದಿ ಯಾದವ್‌ ಬಿಹಾರ  ರಾಜಕೀಯದಲ್ಲಿ ಬಿಗಿ ಹಿಡಿತ ಹೊಂದಿದ್ದಾನೆ.  ಯುವಕನನ್ನು ಗುಂಡು ಹಾರಿಸಿ ಕೊಲೆ ಮಾಡಿದ ಮಗನಿಗೆ ಆಶ್ರಯ ನೀಡಿದ ಆರೋಪದಲ್ಲಿ ಇದೀಗ ಬಿಂದಿ ಯಾದವ್‌ ಜೈಲು ಸೇರಿದ್ದಾನೆ. ರಾಕಿ ಯಾದವ್‌ನಿಗಾಗಿ ಶೋಧ ನಡೆಸುತ್ತಿದ್ದಾಗ ಮನೋರಮಾ ದೇವಿ ಮನೆಯಲ್ಲಿ ಮದ್ಯದ ಬಾಟ್ಲಿಗಳು ಪತ್ತೆಯಾಗಿತ್ತು. ಈ ಕಾರಣದಿಂದಾಗಿ ಮನೋರಮಾ ದೇವಿ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಪೊಲೀಸರು ಆಕೆಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News