×
Ad

ಆಯ್ಕೆಯಾದ ಮರುದಿನವೇ ಕಛೇರಿ ಸಿಬ್ಬಂದಿಗಳಿಗೆ ಚುರುಕು ಮುಟ್ಟಿಸಿದ ಬಂಟ್ವಾಳ ತಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರು

Update: 2016-05-14 12:11 IST

ವಿಟ್ಲ, ಮೇ 14: ಬಂಟ್ವಾಳ ತಾಲೂಕು ಪಂಚಾಯತ್‌ನ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದ ಮರುದಿನವೇ ಕಛೇರಿ ಛೇಂಬರ್‌ಗೆ ಆಗಮಿಸಿದ ಚಂದ್ರಹಾಸ ಕರ್ಕೇರಾ ಹಾಗೂ ಅಬ್ಬಾಸ್ ಅಲಿ ಅವರು ಇಲ್ಲಿನ ಸಿಬ್ಬಂದಿಗಳಿಗೆ ಚುರುಕು ಮುಟ್ಟಿಸಿದ್ದಾರೆ.

ಇತ್ತೀಚೆಗೆ ನಡೆದ ತಾ ಪಂ ಚುನಾವಣೆಯಲ್ಲಿ 34 ಸ್ಥಾನಗಳ ಪೈಕಿ 22 ಸ್ಥಾನಗಳನ್ನು ಗೆದ್ದುಕೊಂಡ ಕಾಂಗ್ರೆಸ್ ಕಳೆದ ಬಾರಿ ಆಡಳಿತ ನಡೆಸಿದ್ದ ಬಿಜೆಪಿಯನ್ನು ಪರಾಭವಗೊಳಿಸಿ ಮತ್ತೆ ಆಡಳಿತ ಚುಕ್ಕಾಣಿ ಹಿಡಿದಿತ್ತು.

ಮಂಗಳವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಹಾಗೂ ಉಪಾಧ್ಯಕ್ಷ ಅಬ್ಬಾಸ್ ಅಲಿ ಅವರು ಬುಧವಾರ ಬೆಳಗ್ಗೆ ತಾ ಪಂ ಕಛೇರಿಯ ತಮ್ಮ ತಮ್ಮ ಛೇಂಬರ್‌ಗೆ ಆಸನ ಸ್ವೀಕರಿಸಿಲು ಆಗಮಿಸಿದ್ದಾರೆ. ಈ ಸಂದರ್ಭ ತಮ್ಮ ಛೇಂಬರ್‌ಗಳನ್ನು ಯಾವುದೇ ಸುಸ್ಥಿತಿಯಲ್ಲಿಡಲು ವಿಫಲರಾದ ಇಲ್ಲಿನ ಸಿಬ್ಬಂದಿ ವರ್ಗವನ್ನು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಜೊತೆಗೂಡಿ ತೀವ್ರ ತರಾಟೆಗೆ ತೆಗೆದುಕೊಂಡರು. ಕಛೇರಿ ಕೆಲಸ-ಕಾರ್ಯಗಳಲ್ಲಿ ಯಾವುದೇ ರೀತಿಯ ಉದಾಸೀನತೆ ಸಹಿಸುವುದಿಲ್ಲ. ಮೈ ಚಳಿ ಬಿಟ್ಟು ಕಾರ್ಯ ನಿರ್ವಹಿಬೇಕೆಂದು ತಾಕೀತು ಮಾಡಿದ ನೂತನ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಅಧ್ಯಕ್ಷ-ಉಪಾಧ್ಯಕ್ಷರ ಛೇಂಬರನ್ನೇ ಸುಸ್ಥಿಯಲ್ಲಿಡಲು ಉದಾಸೀನ ತೋರುವ ನೀವು ಜನ ಸಾಮಾನ್ಯರ ಕೆಲಸ-ಕಾರ್ಯಗಳನ್ನು ಯಾವ ರೀತಿ ನಿಭಾಯಿಸಬಲ್ಲಿರಿ ಎಂದು ಗರಂ ಆದರು. ಅಧಿಕಾರ ಸ್ವೀಕರಿಸಿದ ಮರುದಿನವೇ ಕ್ಲಪ್ತ ಸಮಯಕ್ಕೆ ಕಛೇರಿಗೆ ಆಗಮಿಸಿದ ಅಧ್ಯಕ್ಷ-ಉಪಾಧ್ಯಕ್ಷರು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಕಾರ್ಯವೈಖರಿ ಗಮನಿಸುವ ಮೂಲಕ ತಮ್ಮ ಅಧಿಕಾರಾವಧಿಯಲ್ಲಿ ಕಾರ್ಯವೈಖರಿಗೆ ಚುರುಕು ಮುಟ್ಟಿಸುವ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News