ಕಟ್ಟಡ ಕಾಮಗಾರಿಗಳು ಅನಿಶ್ಚಿತತೆಯಲ್ಲಿ: ಡಿ.ಬಿ. ಮೆಹ್ತಾ
ಮಂಗಳೂರು, ಮೇ 14: ಕಳೆದ ನಾಲ್ಕೈದು ತಿಂಗಳಿನಿಂದ ಮರಳಿನ ಕೊರತೆಯಿಂದ ಕಟ್ಟಡ ಕಾಮಗಾರಿಗಳಿಗೆ ಈಗಾಗಲೇ ತೊಂದರೆಯಾಗಿದ್ದರೆ, ಇದೀಗ ನಗರದಲ್ಲಿ ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದನ್ವಯ ಕಟ್ಟಡ ಕಾಮಗಾರಿಗಳಿಗೆ ನೀರಿನ ಪೂರೈಕೆ ಸ್ಥಗಿತಗೊಂಡಿರುವುದರಿಂದ ಮತ್ತಷ್ಟು ತೊಂದರೆಯಾಗಿದೆ ಎಂದು ಕ್ರೆಡಯ್ ಅಧ್ಯಕ್ಷ ಡಿ.ಬಿ. ಮೆಹ್ತಾ ಅಭಿಪ್ರಾಯಿಸಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಗರದಲ್ಲಿ ನೀರಿನ ಸಮಸ್ಯೆಯನ್ನು ನಿವಾರಿಸುವಲ್ಲಿ ಕಟ್ಟಡ ನಿರ್ಮಾಣ ಅಸೋಸಿಯೇಶನ್ ಕೂಡಾ ಜಿಲ್ಲಾಡಳಿತದ ಜತೆ ಕೈಜೋಡಿಸುತ್ತಿದೆ ಎಂದರು.
ಹಾಗಿದ್ದರೂ ಈಗಾಗಲೇ ಹಲವಾರು ಕಾರಣಗಳಿಂದ ಕಳೆದ ನಾಲ್ಕೈದು ತಿಂಗಳಿನಿಂದ ಕಾರ್ಮಿಕರಿಗೆ ಸೂಕ್ತವಾದ ಕೆಲಸವಿಲ್ಲದೆ ತೊಂದರೆಯಲ್ಲಿದ್ದಾರೆ. ಇದೀಗ ಕಟ್ಟಡ ಕಾಮಗಾರಿ ನಡೆಯುವಲ್ಲಿನ ತೆರೆದ ಬಾವಿಗಳು ಹಾಗೂ ಬೋರ್‌ವೆಲ್‌ಗಳಲ್ಲಿನ ನೀರು ಕಟ್ಟಡ ಕಾಮಗಾರಿಗಳಿಗೆ ಬಳಸದಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಇನ್ನು ಮಳೆಗಾಲದ ಆರಂಭದಲ್ಲಿ ಹೊರ ರಾಜ್ಯ ಜಿಲ್ಲೆಗಳ ಕಾರ್ಮಿಕರು ಅನಿವಾರ್ಯವಾಗಿ ತಮ್ಮ ಊರುಗಳಿಗೆ ತೆರಳುತ್ತಾರೆ. ಆಮೇಲೆ ಮಳೆಗಾಲ ಮುಗಿಯುವವರೆಗೆ ಅವರು ಹಿಂತಿರುವುದಿಲ್ಲ. ಇದರಿಂದ ನಗರದಲ್ಲಿ ಕಟ್ಟಡ ಕಾಮಗಾರಿಗಳು ನಿಜಕ್ಕೂ ಆತಂಕದ ಸ್ಥಿತಿಯನ್ನು ಎದುರಿಸಬೇಕಾಗಿದೆ. ನಗರದ ಕಟ್ಟಡಗಳು ಕೂಡಾ ಆರ್ಥಿಕತೆಯ ಬೆನ್ನೆಲುಬಾಗಿದೆ. ಹಾಗಾಗಿ ಮುಂಗಾರು ಪೂರ್ವ ಮಳೆಯನ್ನೇ ಇದೀಗ ಕಟ್ಟಡ ನಿರ್ಮಾಣ ಕಾಮಗಾರಿಗೂ ಆಶ್ರಯಿಸಬೇಕಾಗಿದೆ ಎಂದು ಅವರು ಹೇಳಿದರು.
ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನೀರಿನ ಬಳಕೆ ಬಗ್ಗೆ ಜಾಗೃತಿ
ನಗರದಲ್ಲಿನ ನೀರಿನ ಕೊರತೆ ಹಿನ್ನೆಲೆಯಲ್ಲಿ ಈಗಾಗಲೇ ಆಸ್ಪತ್ರೆಯ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳನ್ನು 15 ದಿನಗಳ ಹಿಂದೆಯೇ ರಜೆಯ ಮೇಲೆ ಕಳುಹಿಸಲಾಗಿದೆ. ಉಳಿದಂತೆ ಆಸ್ಪತ್ರೆಯ ರೋಗಿಗಳಿಗೆ ತೊಂದರೆ ಆಗದಂತೆ ನೀರಿನ ಬಳಕ್ಕೆ ಕುರಿತು ಮುಂಜಾಗೃತಾ ಕ್ರಮಗಳನ್ನು ವಹಿಸಲಾಗಿದೆ ಎಂದು ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ರಿಚ್ಚರ್ಡ್ ಕುವೆಲ್ಲೋ ತಿಳಿಸಿದರು.
ಆಸ್ಪತ್ರೆಯಲ್ಲಿ ದಿನದಲ್ಲಿ ಆರು ಬಾರಿ ಕನ್ನಡ, ಮಲಯಾಳಿ ಹಾಗೂ ಆಂಗ್ಲ ಭಾಷೆಯಲ್ಲಿ ನೀರಿನ ಮಿತ ಬಳಕೆಯ ಕುರಿತಂತೆ ಜಾಗೃತಿ ಮೂಡಿಸಲಾಗುತ್ತಿದೆ. ರೋಗಿಗಳು ಹಾಗೂ ಅವರನ್ನು ನೋಡಿಕೊಳ್ಳುವವರಿಗೆ ತೊಂದರೆಯಾಗದಂತೆ ಹಾಗೂ ನೀರು ಪೋಲಾಗದ ರೀತಿಯಲ್ಲಿ ಮಿತವಾಗಿ ಪೈಪ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಶೌಚಾಲಯಗಳ ಫ್ಲಶಿಂಗ್‌ಗೆ ಆಸ್ಪತ್ರೆಯ ಸಂಸ್ಕರಣಾ ಘಟಕದಲ್ಲಿ ಶುದ್ಧೀಕರಿಸಲಾಗುವ ನೀರನ್ನೇ ಬಳಕೆ ಮಾಡಲಾಗುತ್ತಿದೆ. ಈ ಮೂಲಕ ಆಸ್ಪತ್ರೆಯು ನಗರದಲ್ಲಿ ತಲೆದೋರಿರುವ ನೀರಿನ ಸಮಸ್ಯೆಗೆ ಜಿಲ್ಲಾಡಳಿತದ ಜತೆ ಸ್ಪಂದಿಸುತ್ತಿದೆ ಎಂದು ಅವರು ಹೇಳಿದರು.