ಎತ್ತಿನಹೊಳೆ ಯೋಜನೆಗೆ ಬೆಂಬಲ: ಕೋಡಿಜಾಲ್
ಮಂಗಳೂರು, ಮೇ 14: ಎತ್ತಿನಹೊಳೆ ಯೋಜನೆಗೆ ದ.ಕ. ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಮುಡಾ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎತ್ತಿನಹೊಳೆ ಯೋಜನೆಗೂ ನೇತ್ರಾವತಿ ನದಿಗೂ ಯಾವುದೇ ಸಂಬಂಧವಿಲ್ಲ. ಅದೇ ರೀತಿ ಎತ್ತಿನಹೊಳೆ ಹಾಗೂ ಬರ ಪರಿಸ್ಥಿತಿಗೂ ಸಂಬಂಧವಿಲ್ಲ. ಯೋಜನೆ ಅನುಷ್ಠಾನದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ಹಾನಿಯೂ ಆಗುವುದಿಲ್ಲ ಎಂದರು.
ವೀರಪ್ಪ ಮೊಲಿ, ಯಡಿಯೂರಪ್ಪ, ಡಿವಿ ಸದಾನಂದ ಗೌಡ, ಶೆಟ್ಟರ್ ಅವರೆಲ್ಲ ತಿಳುವಳಿಕೆ ಇಲ್ಲದವರಲ್ಲ. ಎಲ್ಲಾ ತಾಂತ್ರಿಕ ಅಭಿಪ್ರಾಯಗಳನ್ನು ಅವರು ಪಡೆದು ಯೋಜನೆ ಮಾಡಿಸಿದ್ದಾರೆ ಎಂದವರು ಹೇಳಿದರು.
‘ಈ ಯೋಜನೆ ಆರಂಭವಾಗುವಾಗ ಇದಕ್ಕೆ ಮೊದಲಾಗಿ ವಿರೋಧ ಮಾಡಿದವರು ಸಚಿವ ರಮಾನಾಥ ರೈ. ಯೋಜನೆ ವಿರೋಧಿಸಿ ಡಾನ್‌ಬಾಸ್ಕೊದಲ್ಲಿ ಆಗ ಸಭೆಯನ್ನೂ ನಡೆಸಿದ್ದರು’ ಎಂದು ಕೋಡಿಜಾಲ್ ಹೇಳಿದರು. ಮೊದಲಿಗೆ ವಿರೋಧ ಮಾಡಿದ ಅವರು ಈಗ ಯೋಜನೆಯನ್ನು ಬೆಂಬಲಿಸುತ್ತಿದ್ದಾರೆ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕೋಡಿಜಾಲ್, ‘ಈ ಯೋಜನೆಯಿಂದ ಇಲ್ಲಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿದ ನಂತರ ಅವರು ಬೆಂಬಲ ನೀಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರ್ಣಗೊಳಿಸಿದೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುತ್ತಿದೆ. ಈಗಾಗಲೇ 110ಕ್ಕೂ ಅಧಿಕ ಭರವಸೆಗಳನ್ನು ಸರಕಾರ ಈಡೇರಿಸಿದೆ. ಸಿದ್ದರಾಮಯ್ಯನವರು ಓರ್ವ ಪ್ರಶ್ನಾತೀತ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಐದು ವರ್ಷಗಳನ್ನು ಪೂರ್ಣಗೊಳಿಸಲಿದ್ದಾರೆ ಎಂದು ಕೋಡಿಜಾಲ್ ಹೇಳಿದರು.
ಕೇರಳದಲ್ಲಿ ಬಿಜೆಪಿಗೆ ಒಂದೂ ಸ್ಥಾನವೂ ಸಿಗುವುದಿಲ್ಲ. ಕೇರಳದ ಜನತೆ ನರೇಂದ್ರ ಮೋದಿಯವರ ಬಗ್ಗೆ ಕೋಪಗೊಂಡಿದ್ದಾರೆ. ಸಾಕ್ಷರತೆಯಲ್ಲಿ ದೇಶದಲ್ಲೇ ಮುಂದುವರಿದ ಕೇರಳವನ್ನು ಸೋಮಾಲಿಯಾಕ್ಕೆ ಹೋಲಿಸಿರುವುದು ಖಂಡನೀಯ. ಹೀಗಾಗಿ ಕೇರಳದಲ್ಲಿ ಬಿಜೆಪಿಗೆ ಒಂದೇ ಒಂದು ಸ್ಥಾನವೂ ಸಿಗುವುದಿಲ್ಲ. ಕಪ್ಪು ಹಣ ತರುತ್ತೇನೆ ಎಂದು ಹೇಳಿದವರು ಒಂದು ಪೈಸೆಯನ್ನೂ ತರಲು ಸಾಧ್ಯವಾಗಲಿಲ್ಲ ಎಂದವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ವಿಶ್ವಾಸ್ ಕುಮಾರ್ ದಾಸ್, ಪದ್ಮನಾಭ ನರಿಂಗಾನ, ಮುಸ್ತಾ, ನಝೀರ್ ಬಜಾಲ್ ಉಪಸ್ಥಿತರಿದ್ದರು.