ಪತ್ರಿಕಾ ಸಿಬ್ಬಂದಿ ಮತ್ತು ವಾಟ್ಸ್‌ಆ್ಯಪ್ ಗ್ರೂಪ್ ಸದಸ್ಯರ ಮಧ್ಯೆ ಮಾತಿನ ಚಕಮಕಿ
ಪುತ್ತೂರು, ಮೇ 14: ಸ್ಥಳೀಯ ಸುದ್ದಿ ಪತ್ರಿಕೆಯ ಸಂಪಾದಕರ ಹಾಗೂ ಸಿಬ್ಬಂದಿಯ ಮೇಲೆ ಅವಹೇಳನ ಹಾಗೂ ನಿಂದನಾತ್ಮಕ ಶಬ್ದಗಳನ್ನು ಪ್ರಯೋಗಿಸಿರುವುದಾಗಿ ಆರೋಪಿಸಿ ಪತ್ರಿಕಾ ಸಿಬ್ಬಂದಿ ಯುವ ಭಾರತ್ ವಾಟ್ಸ್ ಆ್ಯಪ್ ಗ್ರೂಪ್‌ನ ಸದಸಸ್ಯರನ್ನು ತರಾಟೆಗೆತ್ತಿಕೊಂಡ ಘಟನೆ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದಿದೆ.
ನೇತ್ರಾವತಿ ನದಿ ಉಳಿಸುವ ನಿಟ್ಟಿನಲ್ಲಿ ರಚಿಸಿದ ವೀಡಿಯೋ ಕುರಿತು ಸುದ್ದಿಗೋಷ್ಠಿ ಮುಗಿಸಿ ಪುತ್ತೂರು ಪ್ರೆಸ್‌ಕ್ಲಬ್‌ನಿಂದ ಹೊರಗಡೆ ಹೋಗುತ್ತಿದ್ದ ಯುವ ಭಾರತ್ ವಾಟ್ಸ್ ಆ್ಯಪ್ ಗ್ರೂಪ್‌ನ ಅಡ್ಮಿನ್‌ಗಳಾದ ಚಿನ್ಮಯ್, ಪ್ರದೀಪ್, ಲತೇಶ್ ಮತ್ತಿತರರ ಮೇಲೆ ಸುದ್ದಿ ಪತ್ರಿಕೆಯ ಸಿಬ್ಬಂದಿ ಮುತ್ತಿಗೆ ಹಾಕಿ ಅವಹೇಳನ ಮಾಡಿರುವ ಬಗ್ಗೆ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಇವರ ನಡುವೆ ಮಾತಿನ ಚಕಮಕಿ ನಡೆಯಿತು. ಮಾತಿಗೆ ಮಾತು ಬೆಳೆದು ಹೊಕೈ ಹಂತಕ್ಕೆ ತಲುಪಿತು.
ಇದೇ ವೇಳೆಗೆ ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಠಾಣೆಯ ಎಸ್ಸೈ ಅಬ್ದುಲ್ ಖಾದರ್ ಮತ್ತು ಸಿಬ್ಬಂದಿ ಎಲ್ಲರನ್ನೂ ಸಮಾಧಾನಿಸಿ ಠಾಣೆಗೆ ಕರೆದೊಯ್ದರು. ಬಳಿಕ ಠಾಣೆಯಲ್ಲಿ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಪ್ರಕರಣವನ್ನು ಇತ್ಯರ್ಥಗೊಳಿಸಿದರು.