ಬಾಲಕಿಯ ‘ಗೌರವ ಹತ್ಯೆ’ ನಡೆಸಿದ ದುಷ್ಕರ್ಮಿಗಳ ಮೇಲೆ ಹಸುವಿನ ದಾಳಿ

Update: 2016-05-14 14:27 GMT

ಗ್ವಾಲಿಯರ್,ಮೇ 14: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಶುಕ್ರವಾರ ‘ಗೌರವ ಹತ್ಯೆ’ಯ ಶಂಕಿತ ಘಟನೆಯಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳನ್ನು ಖುದ್ದು ಆಕೆಯ ತಂದೆ ಮತ್ತು ಚಿಕ್ಕಪ್ಪ ಸೇರಿಕೊಂಡು ಚೂರಿಯಿಂದ ಇರಿದು ಸಾಯಿಸಿದ್ದಾರೆ.

ನಗರದ ಹಝಿರಾದಲ್ಲಿರುವ ಮಹಿಳಾ ಆಶ್ರಮದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆ ವೇಳೆ ಬಾಲಕಿ ಕಿರಿಚಾಡಿದ್ದು, ಸಮೀಪದಲ್ಲಿದ್ದ ಹಸುವೊಂದು ಓರ್ವ ದುಷ್ಕರ್ಮಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಆತನನ್ನು ರಕ್ಷಿಸಲು ಧಾವಿಸಿದ ಇನ್ನೊಬ್ಬನೂ ಗಾಯಗೊಂಡಿದ್ದಾನೆ. ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯ ದಾಖಲಾಗಿದ್ದು, ತನ್ನ ಕರುವನ್ನು ರಕ್ಷಿಸಲು ಹಸು ಹಂತಕರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.

ಆರೋಪಿಗಳಾದ ಕಲ್ಯಾಣ ಸಿಂಗ್ ಮತ್ತು ಲಖನ ಸಿಂಗ್ ತಲೆಮರೆಸಿಕೊಂಡಿದ್ದಾರೆ.

ಮೊರೆನಾ ಜಿಲ್ಲೆಯ ಪಹಾಡಿಗಾಂವ್ ನಿವಾಸಿಯಾದ ಬಾಲಕಿ ಕಳೆದ ಜನವರಿಯಲ್ಲಿ ಸೋನು(22) ಎಂಬಾತನೊಂದಿಗೆ ಪರಾರಿಯಾಗಿದ್ದಳು. ಆಕೆಯ ತಂದೆಯ ದೂರಿನ ಮೇರೆಗೆ ಅಪ್ರಾಪ್ತ ವಯಸ್ಕ ಬಾಲಕಿಯ ಅಪಹರಣದ ಆರೋಪದಲ್ಲಿ ಪೊಲೀಸರು ಸೋನುವನ್ನು ಬಂಧಿಸಿ ಜೈಲಿಗೆ ತಳ್ಳಿದ್ದರು. ಹೆತ್ತವರೊಂದಿಗೆ ತೆರಳಲು ನಿರಾಕರಿಸಿದ್ದ ಬಾಲಕಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಸರಕಾರದ ಮಹಿಳಾ ಸಂರಕ್ಷಣಾ ಕೇಂದ್ರಕ್ಕೆ ಸೇರಿಸಲಾಗಿತ್ತು. ಬಳಿಕ ಬಾಲಕಿ ಇಲ್ಲಿಯ ಎನ್‌ಜಿಓವೊಂದು ನಡೆಸುತ್ತಿರುವ ಮಹಿಳಾ ಆಶ್ರಮಕ್ಕೆ ಸ್ಥಳಾಂತರಗೊಂಡಿದ್ದಳು ಮತ್ತು ಅಲ್ಲಿಯೇ ಆಕೆಯ ಹತ್ಯೆ ನಡೆದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News