×
Ad

ಬೋರುಗುಡ್ಡೆ ಅಂಗನವಾಡಿಗೆ ಸೋಲಾರ್ ಸೌಲಭ್ಯ

Update: 2016-05-14 19:39 IST

ಮಂಗಳೂರು, ಮೇ 14: ತಾಲೂಕಿನ ನೆಲ್ಲಿಕಾರು ಗ್ರಾ.ಪಂ. ವ್ಯಾಪ್ತಿಯ ಬೋರುಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಸೆಲ್ಕೋ ಫೌಂಡೇಶನ್ ಮತು ಸ್ಥಳೀಯ ದಾನಿಗಳ ನೆರನಿಂದ ಸೋಲಾರ್ ಫ್ಯಾನ್ ಮತ್ತು ದೀಪ ಅಳವಡಿಸುವ ಮೂಲಕ ಸೋಲಾರ್ ಗ್ರಾಮ ನಿರ್ಮಾಣ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಜನ ಶಿಕ್ಷಣ ಟ್ರಸ್ಟ್, ಸುಗ್ರಾಮ ಸಂಘ, ಅಪ್ನಾದೇಶ್, ಸೆಲ್ಕೋ ಫೌಂಡೇಶನ್ ಹಾಗೂ ಗ್ರಾ.ಪಂ. ಸಹಭಾಗಿತ್ವದಲ್ಲಿ ನಡೆದ ಸೌರಶಕ್ತಿ ಅಭಿಯಾನಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಂತ್ ಸೋಲಾರ್ ದೀಪ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಅಭಿಯಾನದ ಮೂಲಕ ಅಂಗನವಾಡಿ ಕೇಂದ್ರ ಹಾಗೂ ಪ.ಜಾತಿ, ಪ.ಪಂ. ಮನೆಗಳಿಗೆ ಸೋಲಾರ್ ಅಳವಡಿಸಲು ಗ್ರಾ.ಪಂನಿಂದ ನೆರವು ನೀಡಲಾಗುವುದು ಎಂದು ತಿಳಿಸಿದರು.

ಮಹಾತ್ಮ ಗಾಂಧಿ ನರೇಗಾದ ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ ಮಾತನಾಡಿ, ಸೌರಶಕ್ತಿ ಅಭಿಯಾನದ ಮೂಲಕ ಸಂಪೂರ್ಣ ಸೌರಶಕ್ತಿ ಗ್ರಾಮ, ಮಹಾತ್ಮಾಗಾಂಧಿ ನರೇಗಾ ಯೋಜನೆಯ ಮೂಲಕ ಪರಿಸರ ಸಂರಕ್ಷಣೆ ಹಾಗೂ ನೆಲ ಜಲ ಸಮೃದ್ಧಿಗೆ ಮನೆಗೊಂದು ಬಾವಿ, ಮಳೆನೀರು ಕೊಯ್ಲು, ಇಂಗು ಗುಂಡಿ ನಿರ್ಮಾಣ, ಗಿಡ ಮರ ನೆಡುವ ಸಾಂಪ್ರದಾಯಿಕ ಕೆರೆ ಕಟ್ಟೆ ತೋಡುಗಳ ಸಮರ್ಪಕ ನಿರ್ವಹಣೆ ಕಾಮಗಾರಿಗಳನ್ನು ಆದ್ಯತೆಯಲ್ಲಿ ಕೈಗೊಳ್ಳಬಹುದು ಎಂದು ಹೇಳಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದಿನೇಶ್ ಮಾತನಾಡಿ, ನರೇಗಾದಡಿ ಬಾವಿ ನಿರ್ಮಾಣ, ಕೆರೆ ಹೂಳೆತ್ತುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ಉದಯ್, ಲಯನ್ಸ್ ಕ್ಲಬ್ ಅಧ್ಯಕ್ಷ ನಾರಾಯಣ, ವಾಲ್ಪಾಡಿ ಗ್ರಾ.ಪಂ. ಅಧ್ಯಕ್ಷೆ ವಸಂತಿ, ಸುರೇಖಾ, ಸೆಲ್ಕೋ ಕಂಪೆನಿಯ ಹಿರಿಯ ವ್ಯವಸ್ಥಾಪಕ ಕೃಷ್ಣರಾಜ್, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಸಂಯೋಜಕಿ ಚಂಚಲಾ ಉಪಸ್ಥಿತರಿದ್ದರು.

ಸುಗ್ರಾಮ ಸಂಘದ ಸದಸ್ಯೆ ಕಮಲ ಕಾರ್ಯಕ್ರಮ ಸಂಯೋಜಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಗುಣವತಿ ಸ್ವಾಗತಿಸಿ, ಮಾದರಿ ಗ್ರಾಮ ವಿಕಾಸ ಕೇಂದ್ರದ ಪ್ರೇರಕಿ ಸುನೀತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News