ಸೈಬರ್ ಕ್ರೈಂಗೆ ಕಡಿವಾಣ ಹಾಕಲು ಸಾರ್ವಜನಿಕರ ಆಗ್ರಹ

Update: 2016-05-14 14:36 GMT

ಉಪ್ಪಿನಂಗಡಿ, ಮೇ 14: ಮೊಬೈಲ್ ಸಂದೇಶ, ಪೋನ್ ಕರೆ, ಇಮೇಲ್ ಸಂದೇಶದ ಮೂಲಕ ಹಲವು ಮಂದಿ ವಂಚನೆಗೊಳಗಾಗಿದ್ದು, ಸೈಬರ್ ಕ್ರೈಂಗೆ ಪೊಲೀಸರು ಕಡಿವಾಣ ಹಾಕಬೇಕು ಎಂಬ ಅಭಿಪ್ರಾಯ ಉಪ್ಪಿನಂಗಡಿಯಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಕೇಳಿಬಂತು.

ಪ್ರೊಬೆಷನರಿ ಎಎಸ್ಪಿ ಲಕ್ಷ್ಮಣ್ ನಿಂಬರ್ಗಿ ಅಧ್ಯಕ್ಷತೆಯಲ್ಲಿ ಇಲ್ಲಿನ ಸಿಎ ಬ್ಯಾಂಕ್‌ನ ಸಂಗಮ ಕೃಪಾ ಸಭಾಂಗಣದಲ್ಲಿ ಶನಿವಾರ ನಡೆದ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಶ್ರೀರಾಮ ವಿದ್ಯಾಲಯದ ಸಂಚಾಲಕ ಯು.ಜಿ.ರಾಧಾ, ನಿಮಗೆ ಬಹುಮಾನ ಬಂದಿದೆ, ಟವರ್ ನಿರ್ಮಾಣಕ್ಕೆ ಜಾಗ ಕೊಡಿ ಲಕ್ಷಾಂತರ ರೂಪಾಯಿ ನೀಡುತ್ತೇವೆ ಎಂಬುದಾಗಿ ಮೊಬೈಲ್ ಸಂದೇಶಗಳು ಹಲವರಿಗೆ ಬರುತ್ತಿದ್ದು, ಹಣದ ಆಸೆಗೆ ಬಿದ್ದು ಇವರೊಂದಿಗೆ ಸಂಪರ್ಕ ಬೆಳೆಸಿದರೆ ವಂಚನೆಗೊಳಗಾಗುವುದು ಖಂಡಿತ. ಇನ್ನೊಂದೆಡೆ ದೂರವಾಣಿ ಕರೆ ಮಾಡಿ ಬ್ಯಾಂಕ್ ದಾಖಲೆಗಳನ್ನೂ ಕೇಳಲಾಗುತ್ತಿದೆ ಎಂದರು.

ಇದಕ್ಕುತ್ತರಿಸಿದ ಎಎಸ್ಪಿ, ಜನತೆ ವಂಚನೆ ಹೋದ ಬಳಿಕವಷ್ಟೇ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುತ್ತಾರೆ. ಹೀಗೆ ವಂಚನೆಗೊಳಪಡಿಸುವವರು ಬಿಹಾರ, ಜಾರ್ಖಂಡ್ ಮುಂತಾದ ರಾಜ್ಯಗಳಲ್ಲಿರುವುದು ಬೆಳಕಿಗೆ ಬಂದಿದ್ದು, ವ್ಯವಸ್ಥಿತ ಜಾಲದ ಮೂಲಕ ಅವರು ಕಾರ್ಯಾಚರಣೆ ನಡೆಸುತ್ತಾರೆ. ಒಬ್ಬನನ್ನು ವಂಚಿಸಿದ ಬಳಿಕ ಅವರು ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ. ಆದರೂ, ಇಂತಹವರ ವಿರುದ್ಧ ಪೊಲೀಸ್ ಇಲಾಖೆ ನಿಗಾ ಇಟ್ಟಿದ್ದು, ಜನರು ಕೂಡಾ ಅವರ ಸಂದೇಶಕ್ಕೆ ಯಾವುದೇ ಮರುತ್ತರ ನೀಡದೆ ಸುಮ್ಮನಿದ್ದರೆ ಸಮಸ್ಯೆ ಸೃಷ್ಟಿಯಾಗುವುದಿಲ್ಲ. ಎಲ್ಲಾ ಬ್ಯಾಂಕ್‌ಗಳು ಒಗ್ಗೂಡಿ ಅವರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಇಂತಹ ವಂಚನೆಗಳ ಬಗ್ಗೆ ಎಚ್ಚರವಿರುವಂತೆ ಮಾಹಿತಿ ಕಾರ್ಯಾಗಾರ ನಡೆಸುವುದು ಉತ್ತಮ. ಈ ಬಗ್ಗೆ ಬ್ಯಾಂಕ್‌ಗಳ ಗಮನಕ್ಕೆ ತರಲಾಗುವುದು ಎಂದರು.

ಶಾಲಾ ದಿನಗಳಲ್ಲಿ ಜೀಪು, ಆಟೊ ರಿಕ್ಷಾ ಮೊದಲಾದ ವಾಹನಗಳಲ್ಲಿ ಕೆಲವರು ವಿದ್ಯಾರ್ಥಿಗಳನ್ನು ಜೋತಾಡಿಸಿಕೊಂಡು ಹೋಗುತ್ತಾರೆ. ಇದರಿಂದ ಅಪಾಯವುಂಟಾಗುವ ಸಾಧ್ಯತೆಯಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂಬ ಸಾರ್ವಜನಿಕರು ಒತ್ತಾಯಿಸಿದಾಗ, ಉತ್ತರಿಸಿದ ಎಎಸ್ಪಿ ಲಕ್ಷ್ಮಣ್ ನಿಂಬರ್ಗಿ, ಈ ಬಗ್ಗೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಆದರೆ ಮಕ್ಕಳ ಬಗ್ಗೆ ಹೆತ್ತವರಿಗೂ ಜವಾಬ್ದಾರಿ ಅಗತ್ಯ. ವಾಹನಗಳಲ್ಲಿ ಜೋತಾಡಿಕೊಂಡು ಹೋಗಬೇಡಿ ಎಂದು ಮಕ್ಕಳಿಗೆ ಮನವರಿಕೆ ಮಾಡುವ ಪ್ರಯತ್ನ ಹೆತ್ತವರಿಂದಾಗಬೇಕು ಎಂದರು.

ಕೌಕ್ರಾಡಿಯಲ್ಲಿ ಯುವತಿಯೋರ್ವಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಪೊಲೀಸ್ ಇಲಾಖೆ ಮುಚ್ಚಿಹಾಕಲು ಯತ್ನಿಸುತ್ತಿದೆ. ಇದರಲ್ಲಿ ಅಧ್ಯಾಪಕರೋರ್ವರು ಸಾಕ್ಷಿ ನೀಡುತ್ತೇನೆಂದು ಮುಂದೆ ಬಂದರೂ, ಅವರನ್ನು ಸಾಕ್ಷಿಯಾಗಿ ಪರಿಗಣಿಸಲು ಪೊಲೀಸರು ಇನ್ನೂ ಮುಂದಾಗಿಲ್ಲ ಎಂಬ ಆಕ್ರೋಶದ ಮಾತುಗಳು ಸಭೆಯಲ್ಲಿ ವ್ಯಕ್ತವಾದವು.

ಈ ಸಂದರ್ಭ ಈ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ತಾಲೂಕು ಪಂಚಾಯತ್ ಸದಸ್ಯೆ ಉಷಾ ಅಂಚನ್ ಹಾಗೂ ವನಿತಾ ಸಮಾಜದ ಅದ್ಯಕ್ಷೆ ಉಷಾಚಂದ್ರ ಮುಳಿಯ, 2 ವರ್ಷ ಕಳೆದರೂ ಪುಷ್ಪಲತಾ ಕೊಲೆ ಪ್ರಕರಣದ ಸುಳಿವು ಸಿಕ್ಕಿಲ್ಲ. ಮಹಿಳೆಯರಿಗೆ ಇಲ್ಲಿ ನ್ಯಾಯವೇ ಸಿಗುತ್ತಿಲ್ಲ. ಕೆಲವು ಕಡೆ ಕಿಡಿಗೇಡಿಗಳಿಂದಾಗಿ ಒಂಟಿಯಾಗಿ ಮಹಿಳೆಯರು ನಡೆದಾಡಲು ಕಷ್ಟಕರವಾದ ಪರಿಸ್ಥಿತಿ ಈಗಲೂ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕುತ್ತರಿಸಿದ ಎಎಸ್ಪಿ, ಈ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಯತ್ನಿಸುತ್ತಿಲ್ಲ. ತನಿಖೆ ಪ್ರಗತಿಯಲ್ಲಿರುವುದರಿಂದ ಅದರ ವಿವರ ನೀಡಲು ಸಾಧ್ಯವಿಲ್ಲ. ನ್ಯಾಯ ಖಂಡಿತ ಸಿಗುತ್ತದೆ ಎಂದರು.

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಿದ್ದ ಬಂದಾರು ಗ್ರಾಮವನ್ನು ಧರ್ಮಸ್ಥಳದಲ್ಲಿ ಪೊಲೀಸ್ ಠಾಣೆ ಆದ ಬಳಿಕ ಧರ್ಮಸ್ಥಳ ಠಾಣೆಗೆ ಸೇರಿಸಲಾಗಿದೆ. ಇಲ್ಲಿನವರಿಗೆ ಉಪ್ಪಿನಂಗಡಿಗೆ ಬರಲು 16 ಕಿಲೋ ಮೀಟರ್ ಇದ್ದು, ಧರ್ಮಸ್ಥಳಕ್ಕೆ ಹೋಗಬೇಕಾದರೆ 35 ಕಿ.ಮೀ. ದೂರ ಇದೆ. ಆದ್ದರಿಂದ ಬಂದಾರು ಗ್ರಾಮವನ್ನು ಉಪ್ಪಿನಂಗಡಿ ಠಾಣೆಗೆ ಸೇರಿಸಿ ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು. ಈ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಮಾಡುವುದಾಗಿ ಎಎಸ್ಪಿ ಭರವಸೆ ನೀಡಿದರು.

ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಮಾತನಾಡಿ, ಇಚ್ಲಂಪಾಡಿ ಹಾಗೂ ಶಿರಾಡಿ ಗ್ರಾಮಗಳು ಇನ್ನೂ ಪುತ್ತೂರು ಸಂಚಾರಿ ಠಾಣೆಯ ವ್ಯಾಪ್ತಿಯಲ್ಲಿದ್ದು, ಉಳಿದೆಲ್ಲಾ ಗ್ರಾಮಗಳು ಸನಿಹದ ಉಪ್ಪಿನಂಗಡಿ ಸಂಚಾರಿ ಠಾಣಾ ವ್ಯಾಪ್ತಿಗೊಳಪಟ್ಟಿದೆ. ಇದರಿಂದ ಇಚ್ಲಂಪಾಡಿ ಹಾಗೂ ಶಿರಾಡಿ ಪ್ರದೇಶದಲ್ಲಿ ಅಪಘಾತಗಳು ನಡೆದಾಗ ಪುತ್ತೂರು ಸಂಚಾರಿ ಪೊಲೀಸರು ಅಲ್ಲಿಗೆ ಬರುವ ತನಕ ಕಾಯಬೇಕಾದ ಸ್ಥಿತಿ ಇದೆ ಎಂದರು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಎಎಸ್ಪಿ ಉತ್ತರಿಸಿದರು.

ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ, ಮರಳುಗಾರಿಕೆ ಮುಂತಾದ ಕಾಮಗಾರಿಗಳಲ್ಲಿ ಹೊರರಾಜ್ಯದ ಹಾಗೂ ವಲಸೆ ಕಾರ್ಮಿಕರು ಬಂದು ದುಡಿಯುತ್ತಿದ್ದು, ಇವರಲ್ಲಿ ಬಾಂಗ್ಲಾ ನುಸುಳುಕೋರರಿರುವ ಸಾಧ್ಯತೆಯೂ ಇದೆ. ಇವರಲ್ಲಿ ಕೆಲವರು ಇಲ್ಲಿ ಅಪರಾಧ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದ್ದು, ಇಂತಹ ಕಾರ್ಮಿಕರ ಮೇಲೆ ಪೊಲೀಸ್ ಇಲಾಖೆ ನಿಗಾ ಇಡಬೇಕೆಂಬ ಸಾರ್ವಜನಿಕರ ಮನವಿಗೆ ಉತ್ತರಿಸಿದ ಎಎಸ್ಪಿ ಲಕ್ಷ್ಮಣ್ ನಿಂಬರ್ಗಿ, ಇಂತಹವರನ್ನು ಕೆಲಸಕ್ಕೆ ತೆಗೆದುಕೊಳ್ಳುವವರ ಸಹಕಾರವೂ ಇದಕ್ಕೆ ಅತೀ ಅಗತ್ಯವಾಗಿದ್ದು, ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಮೊದಲೇ ನಮಗೆ ಮಾಹಿತಿ ನೀಡಿದರೆ ಅವರ ಪೂರ್ವಾಪರಗಳನ್ನು ತಿಳಿದು ಅವರು ಎಂಥವರು ಎಂದು ನಿರ್ಧರಿಸಲು ನಮಗೆ ಸುಲಭವಾಗುತ್ತದೆ. ಹೊರರಾಜ್ಯದ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಅವರ ಪೂರ್ವಾಪರ ಪರಿಶೀಲನೆ ಅತೀ ಅಗತ್ಯವಾಗಿದ್ದು, ಕೆಲಸಕ್ಕೆ ತೆಗೆದುಕೊಳ್ಳುವವರು ಅಂಥವರ ವಿಳಾಸ, ಭಾವಚಿತ್ರದ ದಾಖಲೆಯನ್ನು ಸ್ವೀಕರಿಸಿದ ಬಳಿಕವೇ ಅವರಿಗೆ ಕೆಲಸ ನೀಡಬೇಕು. ಪೊಲೀಸ್ ಇಲಾಖೆಯೂ ಈ ಬಗ್ಗೆ ನಿಗಾ ಇಡಲಿದೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಯನಾ ಜಯಾನಂದ್, ಸರ್ವೋತ್ತಮ ಗೌಡ, ಉಪ್ಪಿನಂಗಡಿ ಗಾ.ಪಂ.ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ಇಳಂತಿಲ ಗ್ರಾ.ಪಂ. ಅಧ್ಯಕ್ಷ ಈಸುಬು ಪೆದಮಲೆ, ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್, ಬಾರ್ಯ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಪೈ, ಕಣಿಯೂರು ಗ್ರಾ.ಪಂ. ಅಧ್ಯಕ್ಷ ಸುನೀಲ್ ಕುಮಾರ್, ಉಪ್ಪಿನಂಗಡಿ ಠಾಣಾಧಿಕಾರಿ ತಿಮ್ಮಪ್ಪನಾಯ್ಕ ಉಪಸ್ಥಿತರಿದ್ದರು.

ತಾ.ಪಂ. ಸದಸ್ಯರಾದ ಮುಕುಂದ ಬಜತ್ತೂರು, ಸುಜಾತ ಆಚಾರ್ಯ, ಗ್ರಾ.ಪಂ. ಸದಸ್ಯರಾದ ಸುನೀಲ್ ದಡ್ಡು, ಜಯಾನಂದ ಬಂಟ್ರಿಯಾಲ್, ಯು.ಟಿ. ತೌಸೀಫ್, ಯು.ಟಿ.ಫಯಾಝ್, ಹೇಮಾವತಿ, ಸುಂದರಿ, ಸವಿತಾ, ಗುಲಾಬಿ, ಸೇಸಪ್ಪ ನೆಕ್ಕಿಲು, ಮಾಧವ ಪೂಜಾರಿ, ಸುಮತಿ, ಹರಿಣಾಕ್ಷಿ, ವೇಣುಗೋಪಾಲ್ ಶೆಟ್ಟಿ, ನವೀನ್ ಹಾಗೂ ವರ್ತಕರ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ, ಉಪ್ಪಿನಂಗಡಿ ಮಾಲೀಕುದ್ದಿನಾರ್ ಜುಮಾ ಮಸೀದಿ ಅಧ್ಯಕ್ಷ ಮುಸ್ತಾಫ ಕೆಂಪಿ, ಶ್ರೀರಾಮ ಶಾಲಾ ಸಂಚಾಲಕ ಯು.ಜಿ.ರಾಧಾ, ಪ್ರಮುಖರಾದ ಕೈಲಾರು ರಾಜ್‌ಗೋಪಾಲ್ ಭಟ್, ಯು.ಕೆ. ಅಯೂಬ್, ಆನಂದ ರಾಮಕುಂಜ, ಇಸ್ಮಾಯೀಲ್ ಗೋಳಿತೊಟ್ಟು ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದು, ಕುಂದುಕೊರತೆಗಳ ಬಗ್ಗೆ ಪ್ರಸ್ತಾಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News