ಎತ್ತಿನಹೊಳೆ ವಿರೋಧಿ ಜಾಥಾ ಮತ್ತು ಜಿಲ್ಲಾ ಬಂದ್‌ಗೆ ಬೆಂಬಲ

Update: 2016-05-14 16:54 GMT

ಉಳ್ಳಾಲ, ಮೇ 14: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಮೇ 16ರಂದು ನಗರದ ಅಂಬೇಡ್ಕರ್ ವೃತ್ತದಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಮತ್ತು 19ರಂದು ದಕ್ಷಿಣ ಕನ್ನಡ ಜಿಲ್ಲಾ ಬಂದ್ ನಡೆಯಲಿದ್ದು ಇವೆರಡೂ ಪ್ರತಿಭಟನೆಗಳಿಗೂ ಉಳ್ಳಾಲ ವಲಯ ನೇತ್ರಾವತಿ ಸಂರಕ್ಷಣಾ ಸಮಿತಿಯು ಬೆಂಬಲ ಸೂಚಿಸಿದೆ.

ತೊಕ್ಕೊಟ್ಟಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನೇತ್ರಾವತಿ ಸಂರಕ್ಷಣಾ ಸಮಿತಿ ಉಳ್ಳಾಲ ವಲಯದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ, ಈ ನದಿಯ ಒಡಲಿಗೆ ಕತ್ತಿಯಿಟ್ಟು ಜಿಲ್ಲೆಯನ್ನು ಬರಡು ಮಾಡಲು ಹೊರಟಿರುವ ಎತ್ತಿನ ಹೊಳೆ ಯೋಜನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.

ನೇತ್ರಾವತಿ ನದಿ ತಿರುವು ಯೋಜನೆಯ ಹೆಸರನ್ನು ಎತ್ತಿನಹೊಳೆ ಯೋಜನೆ ಎಂದು ಕರೆದು ಸರಕಾರವು ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಮರುಳು ಮಾಡುತ್ತಿದೆ. ನೇತ್ರಾವತಿ ನದಿ ತಿರುವಿನಿಂದ ಬರ ಪೀಡಿತ ಪ್ರದೇಶಗಳ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದು ಎಂಬ ಅಧ್ಯಯನ ನಡೆಸಿದ ತಜ್ಞರ ವರದಿಗಳು ನಮ್ಮ ಕೈಸೇರಿವೆ. ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದ್ದು, ಎತ್ತಿನ ಹೊಳೆ ಯೋಜನೆ ಜಾರಿಯಾದರೆ ಇಲ್ಲಿನ ಪರಿಸ್ಥಿತಿ ಹೇಗಾಗಬಹುದು ಎಂಬುದು ಉತ್ತರವಿಲ್ಲದ ಪ್ರಶ್ನೆಯಾಗಿದೆ ಎಂದು ಹೇಳಿದರು.

ಮೇ 16 ಮತ್ತು 19 ರಂದು ನಡೆಯುವ ಎತ್ತಿನ ಹೊಳೆ ಯೋಜನೆ ವಿರೋಧಿ ಹೋರಾಟದಲ್ಲಿ ಉಳ್ಳಾಲ ಪ್ರದೇಶದಿಂದ ಸುಮಾರು 1,500 ಮಂದಿ ಹೋರಾಟಗಾರರು ಭಾಗವಹಿಸಲಿರುವರೆಂದು ಹೇಳಿದರು.

ಉಳ್ಳಾಲ ವಲಯ ನೇತ್ರಾವತಿ ಸಂರಕ್ಷಣಾ ಸಮಿತಿಯ ಗೌರವ ಮಾರ್ಗದರ್ಶಕರಾದ ರೆ.ಫಾ.ಜೆ.ಬಿ.ಸಲ್ದಾನ,ಉಪಾಧ್ಯಕ್ಷರಾದ ನಾರಾಯಣ ಕುಂಪಲ, ಸಂಚಾಲಕರಾದ ಸುಷ್ಮಾ ಜನಾರ್ಧನ್, ಸಂಘಟನಾ ಕಾರ್ಯದರ್ಶಿ ರಿಯಾಝ್ ಉಳಿಯ, ಜೊತೆ ಕಾರ್ಯದರ್ಶಿ ಪ್ರವೀಣ್ ಕುಮಾರ್ ಕುಂಪಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News