×
Ad

ಮುಲ್ಕಿ: ಅಗ್ನಿ ಆಕಸ್ಮಿಕದಿಂದ ಮೂರು ಮನೆಗಳಿಗೆ ಹಾನಿ

Update: 2016-05-14 21:01 IST

ಮುಲ್ಕಿ, ಮೇ 14: ಇಲ್ಲಿನ ಕಡವಿನ ಬಾಗಿಲು ಪ್ರದೇಶದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಒಂದೇ ಛಾವಣಿಯ ಮೂರು ಮನೆಗಳು ಉರಿದು ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಮುಲ್ಕಿ ಕಡವಿನ ಬಾಗಿಲು ನಿವಾಸಿಗಳಾದ ಶಾಂತಾ ಸುವರ್ಣ, ಯೋಗಿನಿ ಬಂಗೇರ ಮತ್ತು ಕಿಟ್ಟ ಸುವರ್ಣ ಎಂಬವರಿಗೆ ಸೇರಿದ ಒಂದೇ ಛಾವಣಿಯ ಮೂರು ಮನೆಗಳ ಛಾವಣಿ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಭಸ್ಮವಾಗಿದೆ ಎಂದು ತಿಳಿದುಬಂದಿದೆ.

ದುರಂತದಲ್ಲಿ ಬಟ್ಟೆಗಳು, ಕಪಾಟಿನಲ್ಲಿದ್ದ ಹಣ, ಆಭರಣ, ದವಸಧಾನ್ಯಗಳು, ಸೇರಿದಂತೆ ಮನೆಯ ಪೀಠೋಪಕರಣಗಳು ಭಸ್ಮವಾಗಿದೆ ಎನ್ನಲಾಗಿದ್ದು, ಸುಮಾರು 4.5 ಲಕ್ಷ ರೂ. ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

ಮುಂಜಾನೆ 3 ಗಂಟೆಯ ವೇಳೆ ಈ ದುರ್ಘಟನೆ ನಡೆದಿದ್ದು, ತಕ್ಷಣ ಅಗ್ನಿಶಾಮಕದಳಕ್ಕೆ ತಿಳಿಸಿದ್ದ ಸ್ಥಳೀಯರು ಬೆಂಕಿ ನಂದಿಸಲು ಮುಂದಾಗಿದ್ದರು. ಆದರೆ, ಮನೆಯ ಅಟ್ಟದಲ್ಲಿದ್ದ ಸೋಗೆ ಹಾಗೂ ತೆಂಗಿನ ಚಿಪ್ಪುಗಳಿಗೆ ಬೆಂಕಿ ಹೊತ್ತಿಕೊಂಡಿದ್ದ ಪರಿಣಾಮ ಮನೆಯ ಮೇಲ್ಛಾವಣಿ ಭಸ್ಮವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂದಿದ್ದ ಅಗ್ನಿಶಾಮಕ ದಳದ ವಾಹನವು ಬರಲು ಸರಿಯಾದ ರಸ್ತೆ ಇಲ್ಲದ ಕಾರಣ ವಾಹನ ಬರಲಾಗಲಿಲ್ಲ. ಬಳಿಕ ಮನೆಗಳ ಪಂಪ್ ಸೆಟ್‌ಗಳನ್ನು ತರಿಸಿ ನದಿಯ ನೀರನ್ನು ಮನೆಗೆ ಹಾರಿಸಿ ಬೆಂಕಿ ನಂದಿಸಲಾಯಿತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News