ಭಾರತದ ಗಡಿಯಲ್ಲಿ ಚೀನಾ ಸೈನಿಕರ ಸಂಖ್ಯೆಯಲ್ಲಿ ಹೆಚ್ಚಳ: ಪೆಂಟಗನ್ ಹೇಳಿಕೆ
ವಾಶಿಂಗ್ಟನ್, ಮೇ 14: ಚೀನಾ ಭಾರತದ ಗಡಿಯಲ್ಲಿ ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಹೇಳಿದೆ.
‘‘ಭಾರತದ ಗಡಿಗೆ ಸಮೀಪದ ಪ್ರದೇಶಗಳಲ್ಲಿ ಚೀನಾ ತನ್ನ ರಕ್ಷಣಾ ಸಾಮರ್ಥ್ಯ ಮತ್ತು ಸೈನಿಕರ ಸಂಖ್ಯೆಯನ್ನು ಹೆಚ್ಚಿಸಿರುವುದನ್ನು ನಾವು ಗಮನಿಸಿದ್ದೇವೆ’’ ಎಂದು ಅಮೆರಿಕದ ಪೂರ್ವ ಏಶ್ಯಕ್ಕಾಗಿನ ಉಪ ಸಹಾಯಕ ರಕ್ಷಣಾ ಕಾರ್ಯದರ್ಶಿ ಅಬ್ರಹಾಂ ಎಂ. ಡೆನ್ಮಾರ್ಕ್ ವಾಶಿಂಗ್ಟನ್‌ನಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.
‘ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾಕ್ಕೆ ಸಂಬಂಧಿಸಿದ ಸೇನಾ ಹಾಗೂ ಭದ್ರತಾ ಬೆಳವಣಿಗೆಗಳು’ ಎಂಬ ವಿಷಯದ ಕುರಿತ 2016ರ ವಾರ್ಷಿಕ ವರದಿಯೊಂದನ್ನು ಅಮೆರಿಕನ್ ಕಾಂಗ್ರೆಸ್‌ಗೆ ಸಲ್ಲಿಸಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಆದಾಗ್ಯೂ, ಇದರ ಹಿಂದಿನ ನೈಜ ಉದ್ದೇಶ ಏನೆಂಬುದನ್ನು ನಿರ್ಧರಿಸುವುದು ಕಷ್ಟ ಎಂದು ಡೆನ್ಮಾರ್ಕ್ ನುಡಿದರು.
‘‘ಇದರಲ್ಲಿ ಆಂತರಿಕ ಸ್ಥಿರತೆಯನ್ನು ಕಾಪಾಡುವ ಉದ್ದೇಶ ಎಷ್ಟು, ಬಾಹ್ಯ ಪರಿಗಣನೆಗಳೆಷ್ಟು ಎಂಬುದನ್ನು ಹೇಳುವುದು ಕಷ್ಟ’’ ಎಂದು ಚೀನಾ ಟಿಬೆಟ್‌ನಲ್ಲಿ ತನ್ನ ಸೇನಾ ಕಮಾಂಡನ್ನು ಮೇಲ್ದರ್ಜೆಗೇರಿಸಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.