ಜಾರ್ಖಂಡ್ ಬಂದ್ ವೇಳೆ ಭಾರೀ ಹಿಂಸಾಚಾರ: 550ಕ್ಕೂ ಹೆಚ್ಚು ಬಂಧನ
ರಾಂಚಿ, ಮೇ 14: ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಕರೆ ನೀಡಿದ್ದ 24 ತಾಸುಗಳ ಬಂದ್‌ನ ವೇಳೆ, ಒಬ್ಬ ಶಾಸಕನ ಸಹಿತ 550ಕ್ಕೂ ಹೆಚ್ಚು ಮಂದಿ ರಾಜ್ಯಾದ್ಯಂತ ಬಂಧಿಸಲ್ಪಟ್ಟಿದ್ದಾರೆ. ಎರಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಇತರ ಹಲವು ವಾಹನಗಳನ್ನು ಹಾನಿಗೊಳಿಸಲಾಗಿದೆ.
ಜಮ್ಶೆಡ್‌ಪುರದಲ್ಲಿ ನಸುಕಿನ ವೇಳೆ, ಟಾಟಾ ಮೋಟರ್ಸ್ ಉದ್ಯೋಗಿಗಳನ್ನು ಸಾಗಿಸುವ ಬಸ್ಸೊಂದಕ್ಕೆ ಬಂದ್ ಬೆಂಗಲಿಗರು ಬೆಂಕಿ ಹಚ್ಚಿದ್ದಾರೆ. ಇತರ ಕೆಲವು ವಾಹನಗಳ ಗಾಜನ್ನು ಪುಡಿ ಮಾಡಿದ್ದಾರೆ ಹಾಗೂ ಕೊಲ್ಹನ್ ಪ್ರದೇಶದಲ್ಲಿ ರಸ್ತೆ ತಡೆ ನಿರ್ಮಿಸಿದ್ದರೆಂದು ಜಮ್ಶೆಡ್‌ಪುರ ಮುಖ್ಯಾಲಯ-1ರ ಪೊಲೀಸ್ ಉಪಾಧೀಕ್ಷಕ ಕೆ.ಎನ್. ಮಿಶ್ರಾ ತಿಳಿಸಿದ್ದಾರೆ. ಪೂರ್ವ ಸಿಂಗಭೂಮ್ ಜಿಲ್ಲೆಯ ಧಂಗಾದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ಕೊಂದಕ್ಕೆ ಬೆಂಕಿ ಹಚ್ಚಲಾಗಿದೆಯೆಂದು ಡಿಎಸ್ಪಿ ಅಮಿತ್‌ಕುಮಾರ್ ಹೇಳಿದ್ದಾರೆ.
ರಾಜ್ಯಾದ್ಯಂತ ಬಂದ್ ಹೇರಿಕೆಗೆ ಯತ್ನಿಸುತ್ತಿದ್ದ 550ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಅವರಲ್ಲಿ 450 ಜನರನ್ನು ಸೆರಾಯ್ಲೇಲಾ-ಖರ್ಸ್ವಾನ್ ಜಿಲ್ಲೆಯೊಂದರಿಂದಲೇ ಸೆರೆಹಿಡಿಯಲಾಗಿದೆ. ಇಂದು ಮುಂಜಾನೆ ಖರ್ಸ್ವಾನ್ ಪ್ರದೇಶದಲ್ಲಿ 50 ಮಂದಿ ಬೆಂಬಲಿಗರೊಂದಿಗೆ ಜೆಎಂಎಂ ಶಾಸಕ ದಶರಥ ಗಾಗ್ರಾಯಿ ಯವರನ್ನು ಬಂಧಿಸಲಾಗಿದೆಯೆಂದು ಎಸ್ಪಿ ಇಂದ್ರಜಿತ್ ಮಹತಾ ತಿಳಿಸಿದ್ದಾರೆ.
ಬಂದ್ ಯಶಸ್ವಿಯಾಗಿದ್ದು, ಚಾರಿತ್ರಿಕವಾಗಿದೆಯೆಂದು ಶಾಸಕ ಹಾಗೂ ಜೆಎಂಎಂನ ಹಿರಿಯ ಉಪಾಧ್ಯಕ್ಷ ಚಂಪೈ ಸೊರೇನ್ ಬಣ್ಣಿಸಿದ್ದಾರೆ. ಆದರೆ, ಬಂದ್‌ನ ಪರಿಣಾಮ ಭಾಗಶಃ ಆಗಿತ್ತೆಂದು ಪೊಲೀಸರು ಹೇಳಿದ್ದಾರೆ.
ಆರ್‌ಜೆಡಿ, ಸಿಪಿಐ ಹಾಗೂ ಜಾರ್ಖಂಡ್ ವಿಕಾಸ್ ಮೋರ್ಚಾ ಬಂದ್‌ಗೆ ಬೆಂಬಲ ನೀಡಿವೆ. ಜಾರ್ಖಂಡ್‌ನಲ್ಲಿ ವ್ಯಾಪಾರ, ಉದ್ಯೋಗ ಹಾಗೂ ಇತರ ಕಾರಣಗಳಿಗಾಗಿ 30 ಅಥವಾ ಹೆಚ್ಚು ವರ್ಷಗಳಿಂದ ನೆಲೆಸಿದ್ದು, ಸ್ಥಿರಾಸ್ತಿ ಹೊಂದಿದವರನ್ನು ರಾಜ್ಯದ ನಿವಾಸಿಗಳೆಂದು ಪರಿಗಣಿಸಲಾಗುವುದು ಇತ್ಯಾದಿ ಮಾನದಂಡಗಳಿರುವ, ಇತ್ತೀಚೆಗೆ ರಾಜ್ಯ ಸರಕಾರ ಘೋಷಿಸಿರುವ ಸ್ಥಳೀಯ ನೀತಿಯನ್ನು ವಿರೋಧಿಸಿ ಜೆಎಂಎಂ ಈ ಬಂದ್‌ಗೆ ಕರೆ ನೀಡಿದೆ.
ರಾಜ್ಯದ ನಿವಾಸಿಯೆನಿಸಲು 1932 ಸರ್ವೇಯನ್ನು ಕನಿಷ್ಠ ಅರ್ಹತಾ ಮಿತಿಯನ್ನಾಗಿಸಬೇಕೆಂಬುದು ಅದರ ಬೇಡಿಕೆಯಾಗಿದೆ.