×
Ad

ಹಕ್ಕುಗಳನ್ನು ಪಡೆಯದೆ ದಲಿತರ ಉದ್ಧಾರ ಸಾಧ್ಯವಿಲ್ಲ: ಡಾ.ಸಿದ್ದರಾಜು

Update: 2016-05-14 23:51 IST

ಉಡುಪಿ, ಮೇ 14: ದಲಿತರು ಕಾನೂನು ಬದ್ಧ ವಾಗಿ ತಮ್ಮ ಹಕ್ಕುಗಳನ್ನು ಪಡೆಯುವ ಬದಲು ಇಂದು ಹೆಚ್ಚು ಹೆಚ್ಚು ದೇವರು-ದಿಂಡರ ಮೊರೆ ಹೋಗುತ್ತಿದ್ದಾರೆ. ಮನೆಯ ಗೋಡೆಯ ಮೇಲೆ ದೇವರ ಭಾವಚಿತ್ರಗಳನ್ನು ಇಟ್ಟುಕೊಂಡ ಮಾತ್ರಕ್ಕೆ ಉದ್ಧಾರವಾಗುವುದಿಲ್ಲ ಎಂಬುದನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು ಎಂದು ಬೆಂಗಳೂರಿನ ಪೊಲೀಸ್ ಡೆಪ್ಯುಟಿ ಕಮಿಷನರ್ ಹಾಗೂ ದಲಿತ ಚಿಂತಕ ಡಾ.ಎಸ್.ಸಿದ್ದರಾಜು ಹೇಳಿದ್ದಾರೆ.
 ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಉಡುಪಿ ಜಿಲ್ಲಾ ಸಮಿ ತಿಯ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರ 125ನೆ ಜನ್ಮ ದಿನದ ಪ್ರಯಕ್ತ ಶನಿವಾರ ಆದಿಉಡುಪಿಯ ಜಿಲ್ಲಾ ಅಂಬೇಡ್ಕರ್ ಭವನದ ಆವರಣದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ‘ಪ್ರಬುದ್ಧ ಭಾರತ ಸ್ವಾಭಿ ಮಾನ ಸಂಕಲ್ಪ ದಿನ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜಾತಿಯ ಸಂಕ್ರಮಣದಲ್ಲಿ ಶೂದ್ರರಿಗೆ 5000 ವರ್ಷಗಳ ಇತಿಹಾಸ ಇದೆ. ದೇಶದ ಮೂಲ ನಿವಾಸಿ ಗಳಾದ ಬಹು ಸಂಖ್ಯಾತ ಸಮಾಜ ಬಟ್ಟೆ ಹಾಕದೆ ಬದುಕುವ ಸ್ಥಿತಿ ಇತ್ತು. ದಾರಿಯಲ್ಲಿ ನಡೆದಾಡುವ ಪರಿಸ್ಥಿತಿ ಇರಲಿಲ್ಲ. ಇದು ಶೂದ್ರರ ಇತಿಹಾಸ ಇದನ್ನು ನಾವು ಅರಿತುಕೊಳ್ಳಬೇಕಾಗಿದೆ ಎಂದರು.
ಹಿಂದೂ ಧರ್ಮ ಸರಿಪಡಿಸಲಾಗದಷ್ಟು ಅಧೋಗತಿಗೆ ತಲುಪಿದೆ. ಜಾತಿ ಇಲ್ಲದೆ ಈ ಧರ್ಮ ಇಲ್ಲ ಎಂದು ಹೇಳಿ ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದು ಬುದ್ಧ ಧಮ್ಮದ ಕಡೆ ನಡೆದರು. ನಮಗೆ ಇಂದು ಅಂಬೇಡ್ಕರ್ ನೀಡಿದ ಮೀಸಲಾತಿ, ಸವಲತ್ತು, ಸೌಲಭ್ಯಗಳು ಬೇಕು. ಆದರೆ ಅಂಬೇಡ್ಕರ್ ಹಾಕಿ ಕೊಟ್ಟ ದಾರಿ, ಅವರ ಆದರ್ಶಗಳು ನಮಗೆ ಬೇಡವಾಗಿದೆ. ನಮ್ಮ ಹಕ್ಕುಗಳನ್ನು ಹೋರಾಟದ ಮೂಲಕ ಪಡೆಯುವ ಸಂಘಟನೆ ನಮಗೆ ಬೇಡವಾಗಿದೆ. ಜಾತೀಯತೆಯನ್ನು ಜೀವಂತ ಇಟ್ಟುಕೊಂಡು ಜನರ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ನಾವೆಲ್ಲ ಅರಿತುಕೊಳ್ಳಬೇಕು ಎಂದವರು ವಿವರಿಸಿದರು. ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮುಖ್ಯ ಭಾಷಣ ಮಾತನಾಡಿದರು. ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ, ರಾಜ್ಯ ಸಮಿತಿ ಸದಸ್ಯೆ ಇಂದಿರಾ ಕೃಷ್ಣಪ್ಪ, ಜಿಪಂ ಅಧ್ಯಕ್ಷ ದಿನಕರ ಬಾಬು, ಮಂಗಳೂರು ಜಿಲ್ಲಾ ಪ್ರಧಾನ ಸಂಚಾಲಕ ರೋಹಿತಾಕ್ಷ, ದಲಿತ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಸಂಚಾಲಕ ರಾಜೇಂದ್ರನಾಥ್, ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಪ್ರಧಾನ ಸಂಚಾಲಕಿ ವಿಮಲಾ ಅಂಚನ್ ಭಾಗವಹಿಸಿದ್ದರು.
ಇದೇ ಸಂದರ್ಭ 500 ಬಡವಿದ್ಯಾರ್ಥಿಗಳಿಗೆ ನೋಟು ಪುಸ್ತಕ ಹಾಗೂ ಪ್ರತಿಭಾ ಪುರಸ್ಕಾರ 
ವಿತರಣೆ, ಸಾಧಕರಿಗೆ ಸನ್ಮಾನವನ್ನು ನೆರವೇರಿಸಲಾಯಿತು. ಜಿಲ್ಲಾ ಪ್ರಧಾನ ಸಂಚಾಲಕ ಎಸ್.ಎಸ್. ಪ್ರಸಾದ್, ಮೈಸೂರು ವಿಭಾಗದ ಸಂಘಟನಾ ಸಂಚಾಲಕ ಹೂವಪ್ಪ ಮಾಸ್ತರ್, ಮುಖಂಡರಾದ ಈರೇಶ್ ಈರೆಹಳ್ಳಿ, ಧರ್ಮೇಶ್ ಕುಪ್ಪೆ, ಬಸವರಾಜ್ ಬದ್ದಿಕೆರೆ ಉಪಸ್ಥಿತರಿದ್ದರು.
ಮೈಸೂರು ವಿಭಾಗದ ಸಂಚಾಲಕ ಮಲ್ಲೇಶ ಅಂಬುಗ ಸ್ವಾಗತಿಸಿದರು. ರಾಜ್ಯ ಸಮಿತಿಯ ಸದಸ್ಯ ಸುಂದರ್ ಗುಜ್ಜರಬೆಟ್ಟು ವಂದಿಸಿದರು. ಶಂಕರ್‌ದಾಸ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ಆದಿಉಡುಪಿವರೆಗೆ ಮೆರವಣಿಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News