×
Ad

ಇಂದು ಬಿಷಪ್ ಅಲೋಶಿಯಸ್‌ರ ಧರ್ಮಾಧ್ಯಕ್ಷ ಪದವಿಯ ವಿಂಶತಿ ಆಚರಣೆ

Update: 2016-05-14 23:51 IST

ಮಂಗಳೂರು, ಮೇ 14: ಮಂಗಳೂರು ಕೆಥೊಲಿಕ್ ಧರ್ಮಪ್ರಾಂತದ ಬಿಷಪ್ ರೆ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ‘ಬಿಷಪ್ ಪದವಿ’ ಸ್ವೀಕರಿಸಿ 20 ವರ್ಷಗಳಾಗಿದ್ದು, ಧರ್ಮಾಧ್ಯಕ್ಷ ಸೇವೆಯ ವಿಂಶತಿ ಆಚರಣೆಯ ಸಂಭ್ರಮದಲ್ಲಿದ್ದಾರೆ.

 ಮೇ 15ರಂದು ನಗರದ ರೊಝಾರಿಯೋ ಕೆಥೆಡ್ರಲ್‌ನಲ್ಲಿ 20 ವರ್ಷಗಳ ಸೇವೆಯ ಕೃತಜ್ಞತಾರ್ಪಣೆಯ ಬಲಿಪೂಜೆಯೊಂದಿಗೆ ಈ ಸಂಭ್ರಮಾಚರಣೆ ನಡೆಯಲಿದೆ. ಬೆಂಗಳೂರಿನ ಆರ್ಚ್ ಬಿಷಪ್ ರೆ. ಡಾ. ಬರ್ನಾರ್ಡ್ ಮೊರಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಿಷಪರ ಹುಟ್ಟು ಹಬ್ಬದ ಅಮೃತೋತ್ಸವ ಆಚರಣೆಯು ಜೂ.21ರಂದು ನಡೆಯಲಿದ್ದು, ಅಂದು ನಗರದಲ್ಲಿ ಸಾರ್ವಜನಿಕ ಸಮಾರಂಭವನ್ನು ಹಮ್ಮಿಕೊಳ್ಳಲು ಸಿದ್ಧತೆಗಳು ನಡೆದಿವೆ.

1941 ಜೂ.21ರಂದು ಬಂಟ್ವಾಳದಲ್ಲಿ ಜನಿಸಿದ್ದ ಅಲೋಶಿಯಸ್ ಪಾವ್ಲ್ ಡಿಸೋಜ 1966 ಡಿ.3ರಂದು ಧರ್ಮಗುರು ದೀಕ್ಷೆ ಸ್ವೀಕರಿಸಿದ್ದರು. ಬಳಿಕ ಆಗಿನ ಬಿಷಪ್ ಬೇಸಿಲ್ ಎಸ್.ಡಿಸೋಜರ ಕಾರ್ಯದರ್ಶಿಯಾಗಿ, ಧರ್ಮಪ್ರಾಂತದ ಚಾನ್ಸಲರ್, ಧರ್ಮಪ್ರಾಂತದ ನ್ಯಾಯಿಕ ದಂಡಾಧಿಕಾರಿ, ಚರ್ಚ್‌ನ ಧರ್ಮ ಗುರು, ಜಪ್ಪುಸೈಂಟ್ ಜೋಸೆಫ್ ಸೆಮಿನರಿಯ ರೆಕ್ಟರ್ ಆಗಿ ಸೇವೆ ಸಲ್ಲಿಸಿದ ಬಳಿಕ 1996 ಮೇ 15ರಂದು ಧರ್ಮಾಧ್ಯಕ್ಷರಾಗಿ ಪೀಠಾರೋಹಣ ಮಾಡಿದ್ದರು. ‘ಯೇಸು ಕ್ರಿಸ್ತರ ಉತ್ಕಟ ಪ್ರೀತಿ’ಯಿಂದ ಎಂಬ ಧ್ಯೇಯದೊಂದಿಗೆ ಧರ್ಮ ಪ್ರಾಂತದ ಆಡಳಿತ ಚುಕ್ಕಾಣಿ ಹಿಡಿದ ಅವರು 20 ವರ್ಷಗಳ ಸೇವಾವಧಿಯಲ್ಲಿ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಿ ಧರ್ಮಪ್ರಾಂತವನ್ನು ಮುನ್ನಡೆಸಿದ್ದಾರೆ. ಶೈಕ್ಷಣಿಕ ಸೇವೆಗೆ ಆದ್ಯತೆ ನೀಡಿದ್ದು, ಧರ್ಮಪ್ರಾಂತ ನಡೆಸುತ್ತಿರುವ ಸಂಸ್ಥೆಗಳ ಔನ್ನತ್ಯಕ್ಕೆ ಕೊಡುಗೆ ನೀಡಿದ್ದಾರೆ. ಕಂಕನಾಡಿಯಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ವಾಮಂಜೂರಿನಲ್ಲಿ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಈ ಪೈಕಿ ಪ್ರಮುಖವಾಗಿದೆ. ಅನೇಕ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪ್ರಥಮ ದರ್ಜೆ ಕಾಲೇಜುಗಳನ್ನು ಆರಂಭಿಸಿದ್ದಾರೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ವಂ. ಫಾ.ವಿಲಿಯಂ ಮೇನೆಜಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News