ಕಚೇರಿಯಲ್ಲಿ ಬೆಂಕಿ: ಐವರು ಬಲಿ; ಮೂವರಿಗೆ ಗಾಯ
Update: 2016-05-14 23:56 IST
ಗಾಝಿಯಾಬಾದ್, ಮೇ 14: ಇಲ್ಲಿನ ರಾಜ್‌ನಗರ್‌ನ ವಸತಿ ಪ್ರದೇಶದಲ್ಲಿ ನಡೆಸುತ್ತಿದ್ದ ಕಚೇರಿಯೊಂದರಲ್ಲಿ ಇಂದು ಸಂಭವಿಸಿದ ಬೆಂಕಿ ಅನಾಹುತದಲ್ಲಿ ಐವರು ಸಾವಿಗೀಡಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಎರಡನೆ ಮಹಡಿಯಲ್ಲಿರುವ ‘ಇಂಡಿಯಾ ಮಾರ್ಟ್’ ಕಚೇರಿಯಲ್ಲಿ ಬೆಳಗ್ಗೆ 10:30ರ ವೇಳೆ, ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹವಾ ನಿಯಂತ್ರಕ ಸ್ಫೋಟಗೊಂಡು ಈ ಅನಾಹುತ ಸಂಭವಿಸಿದೆ ಯೆಂದು ಕವಿನಗರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಶೋಕ್ ಸಿಸೋಡಿಯಾ ಹೇಳಿದ್ದಾರೆ.
ಪ್ರೈಮಾ ಅಸೋಸಿಯೇಟ್ ಕಟ್ಟಡದ 2ನೆ ಮತ್ತು 3ನೆ ಮಹಡಿಗಳಲ್ಲಿದ್ದ ಎಲ್ಲ ಕಚೇರಿಗಳು ಬೆಂಕಿಯಿಂದ ಉರಿಯಲ್ಪಟ್ಟಿತ್ತು. 11 ಮಂದಿ ಉದ್ಯೋಗಿಗಳು ಬೆಂಕಿ ಹಾಗೂ ಹೊಗೆಯಲ್ಲಿ ಸಿಲುಕಿಕೊಂಡರು. ಮೂರು ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸಲು ಹೋರಾಡಿದವು. ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.