×
Ad

ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ದೂರ ಕ್ರಮಿಸಬೇಕಿದೆ: ರೈ

Update: 2016-05-15 14:12 IST

ಮಂಗಳೂರು, ಮೇ 15: ಹಿಂದೆ ಗುರುಕುಲ ವ್ಯವಸ್ಥೆಯಲ್ಲಿ ಶ್ರೀಮಂತರು ಹಾಗೂ ಸಮಾಜದ ಪ್ರಬಲ ವರ್ಗದವರಿಗೆ ಮಾತ್ರ ಸೀಮಿತವಾಗಿದ್ದ ಶಿಕ್ಷಣವಿಂದೂ ಸಾರ್ವತ್ರಿಕವಾಗಿದ್ದರೂ ಶಿಕ್ಷಣ ವ್ಯವಸ್ಥೆಯಲ್ಲಿ ನಾವಿನ್ನೂ ಸಾಕಷ್ಟು ದೂರ ಕ್ರಮಿಸಬೇಕಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಿಸಿದ್ದಾರೆ.

ಬಜ್ಪೆ ಕೊಳಂಬೆಯಲ್ಲಿನ ಪನಾ ಎಜುಕೇಶನ್ ಸಂಸ್ಥೆಯ ಕ್ಯಾಂಪಸ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣವು ಪರಿಸರ ಸಂರಕ್ಷಣೆಗೂ ಪೂರಕವಾಗಿದ್ದಲ್ಲಿ ಮಹತ್ವ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಪನಾ ಸಂಸ್ಥೆಯು ಪರಿಸರ ಸಹ್ಯ ಕ್ಯಾಂಪಸನ್ನು ಹೊಂದಿದ್ದು, ಇನ್ನಷ್ಟು ಮಾರ್ಪಾಡುಗಳನ್ನು ಮಾಡುವ ಅವಕಾಶವನ್ನು ಹೊಂದಿದೆ ಎಂದರು.

ಪನಾ ಕ್ಯಾಂಪಸ್ ಉದ್ಘಾಟಿಸಿದ ಟ್ರಾನ್ಸ್‌ಡಿಸಿಪ್ಲಿನರಿ ಯುನಿವರ್ಸಿಟಿಯ ಉಪ ಕುಲಪತಿ ಡಾ. ದರ್ಶನ್ ಶಂಕರ್, ಅನುಭವದ ಕಲಿಕೆ ಶಿಕ್ಷಣದ ನೈಸರ್ಗಿಕ ವಿಧಾನವಾಗಿದ್ದು, ಇದು ಇಂದಿನ ಅಗತ್ಯವಾಗಿದೆ ಎಂದರು.

ಬುದ್ಧಿಮತ್ತೆ ಮತ್ತು ಜ್ಞಾಪಕ ಶಕ್ತಿಗೆ ಸೀಮಿತವಾಗಿರುವ ಕೊಠಡಿಯೊಳಗಿನ ಇಂದಿನ ಆಧುನಿಕ ಶಿಕ್ಷಣ ಪದ್ಧತಿಯ ಬದಲಿಗೆ ನಮ್ಮ ಜ್ಞಾನೇಂದ್ರಿಯಗಳನ್ನು ಬಳಕೆ ಮಾಡುವಂತಹ ಅನುಭವದ ಕಲಿಕೆಗೆ ಒತ್ತು ನೀಡುವ ಕಾರ್ಯ ಶಿಕ್ಷಣ ಪದ್ಧತಿಯಲ್ಲಿ ಆಗಬೇಕಾಗಿದೆ ಎಂದು ಅವರು ಅಭಿಪ್ರಾಯಿಸಿದರು.

ದಿಕ್ಸೂಚಿ ಭಾಷಣ ನೀಡಿದ ಪನಾ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಪ್ರಸಾದ್ ಹೆಗ್ಡೆ, ಪನಾ ಶಿಕ್ಷಣ ಸಂಸ್ಥೆಯಲ್ಲಿ ಪಠ್ಯಕ್ರಮದ ಜತೆಯಲ್ಲಿ ಕುದುರೆ ಸವಾರಿ, ಕರಾಟೆ, ಯೋಗ ಮೊದಲಾದ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದರು.

ಪರಿಸರ ಸಹ್ಯ ಹಸಿರು ಕ್ಯಾಂಪಸ್‌ಗೆ ಒತ್ತು ನೀಡಲಾಗಿದ್ದು, ಹೊಲಗದ್ದೆಗಳ ನಡುವೆ, ಹಸಿರು ಮರಗಳ ನಡುವೆ ಕ್ಯಾಂಪಸ್ ಇರುವುದಲ್ಲದೆ, ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಲಸೆ ಹಕ್ಕಿಗಳ ಕಲರವವನ್ನೂ ವಿದ್ಯಾರ್ಥಿಗಳು ಅನುಭವಿಸಬಹುದಾಗಿದೆ. ಕ್ಯಾಂಪಸ್‌ಗೆ ಅಗತ್ಯವಾದ ವಿದ್ಯುತ್‌ಚ್ಛಕ್ತಿಗಾಗಿ ಸೋಲಾರ್ ಬಳಕೆಗೂ ಸಂಸ್ಥೆ ಮುಂದಾಗಿದ್ದು, ಕ್ಯಾಂಪಸ್‌ನಲ್ಲಿ ಪರಿಸರ ಸಮತೋಲನವನ್ನು ಕಾಪಾಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ದ್ವಿತೀಯ ಪಿಯುಸಿಯ ಪ್ರತಿಭಾವಂತ 10 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜತೆಗೆ ನೂತನ ದಾಖಲಾತಿಯ ವೇಳೆ ಕ್ಯಾಂಪಸ್ ಆಸುಪಾಸಿನ ವಿದ್ಯಾರ್ಥಿಗಳಿಗೆ ಶೇ. 50ರಷ್ಟು ರಿಯಾಯಿತಿಯನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಭಾಗವಹಿಸಿ ಶುಭ ಕೋರಿದರು. ಸಂಸದ ನಳಿನ್ ಕುಮಾರ್ ಕಟೀಲ್, ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ, ಡಾ. ಎಂ.ಎನ್. ರಾಜೇಂದ್ರ ಕುಮಾರ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಅಜಿತ್ ಕುಮಾರ್ ರೈ ಮಾಲಾಡಿ, ಸಂಸ್ಥೆಯ ಉಪಾಧ್ಯಕ್ಷ ಶ್ಯಾಂ ಕುಮಾರ್, ಆಡಳಿತ ಮತ್ತು ಕಲಿಕೆ ವಿಭಾಗದ ನಿರ್ದೇಶಕಿ ಸುಯಶಾ ಶೆಟ್ಟಿ, ಗಾಯತ್ರಿ ಮತ್ತು ನಮಿತ್ ಆರ್ಕಿಟೆಕ್ಟ್ಸ್‌ನ ನಿರ್ದೇಶಕ ನಮಿತ್ ವರ್ಮಾ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಮುಖ್ಯ ನಿರ್ವಹಣಾ ಅಧಿಕಾರಿ ಉಷಾ ರಾವ್ ಸ್ವಾಗತಿಸಿದರು. ಅದಿತಿ ಶರ್ಮಾ ಪ್ರಾರ್ಥನಾ ನೃತ್ಯ ನೆರವೇರಿಸಿದರು. ರಿಜೊ ಜಾನ್ ಕಾರ್ಯಕ್ರಮ ನಿರೂಪಿಸಿದರು. ಡೀನ್ ರಾಮ್‌ದಾಸ್ ಆರ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News