×
Ad

ಮುಸ್ಲಿಮ್ ಸಮುದಾಯದಲ್ಲಿ ಉನ್ನತ ಶಿಕ್ಷಣ ಆಶಾದಾಯಕ ಬೆಳವಣಿಗೆ: ಸಚಿವ ಅಭಯಚಂದ್ರ ಜೈನ್

Update: 2016-05-15 19:27 IST

ಮೂಡುಬಿದಿರೆ, ಮೇ 15: ಕಷ್ಟದ ಬದುಕಿನ ಜೊತೆಗೆ ಸಮಾಜದಲ್ಲಿ ಉತ್ತಮ ಬಾಂಧ್ಯವದಿಂದ ಜೀವನ ನಡೆಸುತ್ತಿರುವವರು ಬ್ಯಾರಿ ಸಮುದಾಯದವರು. ಇದೀಗ ಮುಸ್ಲಿಮ್ ವಿದ್ಯಾರ್ಥಿನಿಯರು ಇಂದು ಉನ್ನತ ಶಿಕ್ಷಣವನ್ನು ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2015-16ನೆ ಸಾಲಿನ ಬ್ಯಾರಿ ಫೆಲೋಶಿಪ್ ಹಾಗೂ ಬ್ಯಾರಿ ಪುರಸ್ಕಾರ ಪ್ರದಾನ ಸಮಾರಂವನ್ನು ರವಿವಾರ ಮೂಡುಬಿದಿರೆಯ ಸ್ವರ್ಣಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆಯನ್ನು ವಹಿಸಿ ಬ್ಯಾರಿ ಭಾಷಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಪ್ರದಾನ ಮಾಡಿ ಮಾತನಾಡಿದ ಮಾಜಿ ಸಚಿವ ಬಿ.ಎ ಮೊದಿನ್, ನಮ್ಮ ಭಾಷೆಯ ಮೇಲೆ ಅಭಿಮಾನ ಮಾತ್ರವಲ್ಲ, ಅದರ ಬಳಕೆಯು ಹೆಚ್ಚಾಗಬೇಕು. ನಾವು ಭಾಷಾಭಿಮಾನವನ್ನು ಬೆಳೆಸಿದರೆ, ಬ್ಯಾರಿ, ಕೊಂಕಣಿ, ತುಳುವಿನಂತಹ ಪ್ರಾದೇಶಿಕ ಭಾಷೆಗಳು ಅಭಿವೃದ್ಧಿಯಾಗುತ್ತವೆ. ಆಯಾಯ ಅಕಾಡೆಮಿಗಳು ಇದಕ್ಕೆ ಪ್ರೋತ್ಸಾಹಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗುರುಪುರ ಗೋಳಿದಡಿಗುತ್ತು ವಧರ್ಮಾನ ದುರ್ಗಾ ಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮುಸ್ಲಿಮರಲ್ಲಿರುವ ಅಪತ್ಕಾಲದಲ್ಲಿ ಸ್ಪಂದಿಸುವಂತಹ ಗುಣ ಇತರರಿಗೂ ಮಾದರಿ. ಅಪತ್ಕಾಲದಲ್ಲಿ ಸಹಾಯ ಮಾಡುವವರನ್ನು ಮುಂದಿನ ದಿನಗಳಲ್ಲಿ ಅಕಾಡೆಮಿಯು ಗುರುತಿಸಿ ಗೌರವಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಬ್ಯಾರಿ ಪುರಸ್ಕಾರ

ಎಂ.ಹುಸೈನ್ ಅಹ್ಮದ್ ಚಿಕ್ಕಮಗಳೂರು (ಸಮಾಜ ಸೇವೆ), ಮಳ್ಳಡ ಡೇಝಿ ಸೋಮಯ್ಯ ಮಡಿಕೇರಿ (ಭಾಷೆ), ಅಶ್ರಫ್ ಅಪೋಲೋ ಕಲ್ಲಡ್ಕ (ಸಾಹಿತ್ಯ), ಮುಹಮ್ಮದ್ ಸದಕತ್ ಮೂಡುಬಿದಿರೆ (ಶಿಕ್ಷಣ), ಡಾ.ಪ್ರಶಾಂತ್ ಕುಮಾರ್ ಕಲ್ಲಡ್ಕ (ಭಾಷೆ) ಹಾಗೂ ಫಕ್ರುದ್ದೀನ್ ಇರುವೈಲ್ (ಸಾಹಿತ್ಯ), ಅಬ್ದುಲ್ಲತೀಫ್ ಪುತ್ತೂರು ಅವರಿಗೆ ಬ್ಯಾರಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇತ್ತೀಚೆಗೆ ನಿಧನ ಹೊಂದಿದ ಕೆ.ಇ.ಮುಹಮ್ಮದ್ ಕುಂದಾಪುರರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಬ್ಯಾರಿ ಫೆಲೋಶಿಪ್

ನಾಝಿಯ, ಫಾತಿಮಾ (ಉಡುಪಿ ಸರ್ಕಾರಿ ಕಾಲೇಜು), ಫಾತಿಮ ರಿಝ್ವಾನ (ಗೋವಿಂದದಾಸ್ ಕಾಲೇಜು ಸುರತ್ಕಲ್),ಫಾಹಿಮಾ (ಫೀ.ಮಾ.ಕೆ.ಎಂ.ಕಾರ್ಯಪ್ಪಕಾಲೇಜು), ಫಾತಿಮ ರುಫೀದಾ (ಸ್ಕೂಲ್ ಆಫ್ ಸೋಶಿಯಲ್ ವರ್ಕ್, ಮಂಗಳೂರು), ಆಯಿಶಾ (ಏಮ್ಸ್ ಪ್ರ.ದ.ಕಾಜೇಜು ಕಡಬ), ಬದ್ರುದ್ದೀನ್ (ಎಸ್‌ಡಿಎಂ ಲಾ ಕಾಲೇಜು ಮಂಗಳೂರು), ಸಲೀನಾ ಬಾನು (ಆಳ್ವಾಸ್ ಕಾಲೇಜು ಮೂಡುಬಿದಿರೆ) ಹಾಗೂ ರೈಹಾನ (ಗೋವಿಂದಾಸ್ ಕಾಲೇಜು ಸುರತ್ಕಲ್) ಅವರಿಗೆ ಬ್ಯಾರಿ ಫೆಲೋಶಿಪ್ ನೀಡಲಾಯಿತು.

ಬ್ಯಾರಿ ಶಬ್ದಕೋಶ

ಅಕಾಡೆಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಅಕಾಡೆಮಿಗಳ ನಿರ್ಮಾಣ ಅತ್ಯಗತ್ಯ. ಬ್ಯಾರಿ ಭಾಷೆಯು ಪಠ್ಯಕ್ರಮವಾಗಲು ಶಬ್ದಕೋಶ ಹಾಗೂ ವ್ಯಾಕರಣ ಗ್ರಂಥಗಳ ಅವಶ್ಯಕತೆಯಿದೆ. ಬ್ಯಾರಿ-ಕನ್ನಡ-ಇಂಗ್ಲೀಷ್ 40 ಸಾವಿರ ಶಬ್ದಗಳನ್ನು ಒಳಗೊಂಡಿರುವ ಬ್ಯಾರಿ ಶಬ್ದಕೋಶ ರಚನೆಯ ಕಾರ್ಯ ಈಗಾಗಲೇ ಶೇ.60ರಷ್ಟು ಮುಗಿದಿದೆ. ವಿದ್ಯಾರ್ಥಿಗಳು ಬ್ಯಾರಿ ಭಾಷೆ, ಸಂಸ್ಕೃತಿಯೊಂದಿಗೆ ಮುಂದೆ ಬರಬೇಕು ಎನ್ನುವ ಉದ್ದೇಶದಿಂದ ಬ್ಯಾರಿ ಫೆಲೋಶಿಪ್ ಪ್ರಾರಂಭವಾಗಿದೆ ಎಂದರು. ಇಸ್ಮಾಯೀಲ್ ಪೆರಿಂಜೆ, ಜಿ.ಮುಹಮ್ಮದ್ ಹಾಜಿ ಜೋಕಟ್ಟೆ, ಬಿ.ಎ. ಅಬೂಬಕರ್ ಕಲ್ಲಾಡಿ, ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಕಾಡೆಮಿಯ ಸದಸ್ಯ ಅಬ್ದುಲ್ಲತೀಫ್ ನೇರಳಕಟ್ಟೆ ಸ್ವಾಗತಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ದಫ್ ಪ್ರದರ್ಶನ ಮತ್ತು ಬ್ಯಾರಿ ಜನಪದ ಹಾಡು ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News